ಸದಾ ಹೆದರಿಕೆ ಮತ್ತು ಹಿಂಜರಿಕೆಯಲ್ಲೇ ಜೀವಿಸುವ ಪುಕ್ಕಲು ವ್ಯಂಗ್ಯಚಿತ್ರಕಾರನೊಬ್ಬನ ಬಾಳಿನಲ್ಲಿ ಅವನೇ ರಚಿಸಿದ ಪಾತ್ರವೊಂದು ಹೇಗೆ ಅವನ ಜೀವನವನ್ನು ಬದಲಿಸುತ್ತದೆ ಎನ್ನುವುದೇ ಈ ಚಿತ್ರದ ಕಥೆ. ಮೆಡೋನ್ ಅಶ್ವಿನ್ ನಿರ್ದೇಶನದಲ್ಲಿ ಶಿವಕಾರ್ತಿಕೇಯನ್ ನಟಿಸಿರುವ ‘ಮಾವೀರನ್’ ತಮಿಳು ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ stream ಆಗುತ್ತಿದೆ.
‘ಮಾವೀರನ್’ ಒಂದು fantasy ಮಾದರಿಯ ಚಿತ್ರ. ‘ಮಂಡೇಲಾ’ ಚಿತ್ರದ ಖ್ಯಾತಿಯ ನಿರ್ದೇಶಕ ಮೆಡೋನ್ ಅಶ್ವಿನ್ ನಿರ್ದೇಶನದ ಈ ಚಿತ್ರದಲ್ಲಿ ಅವರ ಎಂದಿನ ಶೈಲಿಯಂತೆ ತಮಾಷೆ ಮತ್ತು ಸಾಮಾಜಿಕ ಸಂದೇಶ ಮಿಳಿತವಾಗಿರುವುದನ್ನು ನೋಡಬಹುದು. ಸದಾ ಹೆದರಿಕೆ ಮತ್ತು ಹಿಂಜರಿಕೆಯಲ್ಲೇ ಜೀವಿಸುವ ಪುಕ್ಕಲು ವ್ಯಂಗ್ಯಚಿತ್ರಕಾರನೊಬ್ಬನ ಬಾಳಿನಲ್ಲಿ ಅವನೇ ರಚಿಸಿದ ಪಾತ್ರವೊಂದು ಹೇಗೆ ಅವನ ಜೀವನವನ್ನು ಬದಲಿಸುತ್ತದೆ ಎನ್ನುವುದೇ ಈ ಚಿತ್ರದ ಕಥೆ.
ಕೊಳಗೇರಿಯಲ್ಲಿ ವಾಸಿಸುವ ಜನಗಳ ಜೀವನವನ್ನು ತೆರೆದಿಡುತ್ತ ಚಿತ್ರ ಆರಂಭವಾಗುತ್ತದೆ. ತಾಯಿ ಮತ್ತು ತಂಗಿಯ ಜೊತೆ ಸ್ಲಮ್ಮಿನ ಮುರುಕು ಮನೆಯಲ್ಲಿ ವಾಸಿಸುವ ನಾಯಕ ಸತ್ಯ ಹಿಂಜರಿಕೆ ಮತ್ತು ಹೆದರಿಕೆ ಸ್ವಭಾವದವನು. ಬಹಳ ಪ್ರತಿಭಾವಂತ ವ್ಯಂಗ್ಯಚಿತ್ರಕಾರ. ಅವನ ಪ್ರತಿಭೆಗೆ ಸರಿಯಾದ ಮನ್ನಣೆ ಇನ್ನೂ ಸಿಕ್ಕಿರುವುದಿಲ್ಲ. ನಾಯಕನ ತಾಯಿ ಜೋರು ಸ್ವಭಾವವಾದರೂ ಮಕ್ಕಳ ವಿಷಯದಲ್ಲಿ ಮೃದುವಾಗಿಬಿಡುತ್ತಾಳೆ. ಕೊಳಗೇರಿಯ ಜಾಗವನ್ನು ಲಪಟಾಯಿಸುವ ಹುನ್ನಾರದಿಂದ ರಾಜಕೀಯ ನಾಯಕರು ಕೊಳಗೇರಿಯ ಜನಗಳಿಗೆ ಫ್ಲಾಟ್ ಕೊಟ್ಟು ಸಾಗುಹಾಕಿ ಜಾಗ ತಮ್ಮದಾಗಿಸಿಕೊಳ್ಳುವ ಯೋಜನೆ ಹಾಕಿರುತ್ತಾರೆ. ನಾಯಕನ ಕುಟುಂಬವೂ ಇಷ್ಟವಿಲ್ಲದಿದ್ದರೂ ಫ್ಲಾಟ್‌ಗೆ ಹೋಗುತ್ತಾರೆ. ಆದರೆ ಕಳಪೆ ಕಾಮಗಾರಿಯ ಫ್ಲಾಟ್ ಸ್ವಲ್ಪ ದಿನದಲ್ಲೇ ತನ್ನ ಬಣ್ಣ ಕಳಚಿ ಸಮಸ್ಯೆ ಶುರುವಾಗುತ್ತದೆ. ಸುಣ್ಣ ಬಣ್ಣದಿಂದ ಹಿಡಿದು ಚಿಲಕ, ಬಾಗಿಲು ಎಲ್ಲವೂ ಕಳಪೆ. ಎಲ್ಲರೂ ಕಟ್ಟಡ ಕಟ್ಟಿಸಿದ ಎಂಜಿನಿಯರ್ ವಿರುದ್ಧ ಮಾತಾಡಲು ನಿಂತರೆ ನಾಯಕ ಸತ್ಯ ಮಾತ್ರ ಎಂದಿನಂತೆ ಹಿಂಜರಿಯುತ್ತಾನೆ.
ಅವನ ತಂದೆ ಹೀಗೆಯೇ ನ್ಯಾಯಕ್ಕಾಗಿ ಹೋರಾಡಿ ಅದೇ ರಾಜಕೀಯ ನಾಯಕರ ಕೈಗೆ ಬಲಿಯಾದ ಕರಾಳ ನೆನಪು ನಾಯಕನ ಹೆದರಿಕೆ ಮತ್ತು ಹಿಂಜರಿಕೆಗೆ ಕಾರಣ. ಅಷ್ಟರಲ್ಲೇ ಅವನಿಗೆ ಪತ್ರಿಕೆಯೊಂದರಲ್ಲಿ ಕೆಲಸವೂ ಸಿಗುತ್ತದೆ. ಕೆಲಸ ಕೊಡಿಸಿದ ಸಂಪಾದಕಿಯ ಜೊತೆ ಸ್ನೇಹ ಮತ್ತು ಸಲಿಗೆಯೂ ಶುರುವಾಗುತ್ತದೆ. ಎಲ್ಲವೂ ಸುಗಮವಾದರೆ ಕಥೆ ಹೇಗೆ ಮುಂದೆ ಸಾಗೋದು? ನಾಯಕನ ಹಿಂಜರಿಕೆ ಮತ್ತು ಅಸಹಾಯಕತೆಗಳೇ ಅವನಿಗೆ ಶತ್ರುವಾಗಿ ಅವನು ಸಾವಿನ ಬಾಗಿಲು ತಟ್ಟುವ ಹಂತಕ್ಕೆ ಹೋದಾಗ ಅವನೇ ಸೃಷ್ಟಿಸಿದ ಮಾವೀರನ ಪಾತ್ರದ ಧ್ವನಿ ಅವನ ಕಿವಿಯೊಳಗೆ ಕೂತು ಅವನಿಗೆ ಮುಂದೇನು ಎನ್ನುವ ದಾರಿ ತೋರಿಸುತ್ತಾ ಹೋಗುತ್ತದೆ.
ಆ ಧ್ವನಿ ಅವನಿಗೆ ಮಾತ್ರ ಕೇಳುವುದು. ಅದು ಅವನ ಅಂತರಂಗದ ರೊಚ್ಚಿನ ದನಿಯೋ ಅಥವ ಒಂದು ಮಾಯಾವಿ ಶಕ್ತಿಯೋ ಗೊತ್ತಿಲ್ಲ. ಹೇಗೆ ಅರ್ಥೈಸಿಕೊಂಡರೂ ಸರಿಯೇ ಎನಿಸುವಂತಹ ಕಲ್ಪನೆ ಅದು. ಅದಕ್ಕಾಗಿ ನಿರ್ದೇಶಕರಿಗೆ ಅಭಿನಂದನೆಗಳು. ಮಾವೀರನ ಧ್ವನಿ ಸತ್ಯನಿಗೆ ದಾರಿ ತಪ್ಪಿಸುತ್ತದೆಯೇ ಅಥವ ದಾರಿ ತೋರಿಸುತ್ತದೆಯೇ ಅಥವ ಅವನ ದಾರಿಯನ್ನು ಬದಲಿಸುತ್ತದೆಯೇ ಎನ್ನುವುದನ್ನು ಚಿತ್ರ ನೋಡಿ ತಿಳಿಯಿರಿ.
ಇಲ್ಲಿ ಕಥಾವಸ್ತು ಬಹಳ ಗಂಭೀರವಾದದ್ದು. ಕಟ್ಟಡ ಕಾಮಗಾರಿಯಲ್ಲಿ ನಡೆಯುವ ಭ್ರಷ್ಟಾಚಾರದ ಸುತ್ತ ಹೆಣೆದಿರುವ ಕಥೆ. ಆದರೆ ಆರಿಸಿಕೊಂಡಿರುವ ನಿರೂಪಣೆಯ ಧಾಟಿ ಮಾತ್ರ ಲಘುವಾಗಿ ಹಾಸ್ಯಮಿಶ್ರಿತವಾಗಿದೆ. ಮನರಂಜನೆಯ ದೃಷ್ಟಿಯಿಂದ ಇದು ಕೆಲಸ ಮಾಡಿದೆಯಾದರೂ ಮನರಂಜನೆಯ ಮೂಲಕ ಹೇಳಲು ಹೊರಟಿರುವ ಸಂದೇಶಕ್ಕೆ ಈ ನಿರೂಪಣೆಯ ಧಾಟಿ ತುಸು ಧಕ್ಕೆ ಮಾಡಿರುವುದು ಹೌದು.
ಎರಡನೇ ಅರ್ಧದಲ್ಲಿ ಬರುವ ಮಾವೀರನ ಧ್ವನಿಯ ಕಲ್ಪನೆ ಕೂಡ ಇನ್ನೂ ಸೃಜನಾತ್ಮಕವಾಗಿ ಇರಬಹುದಿತ್ತು. ಸುಮ್ಮನೆ ಸಿನಿಮಾದ ಚಿತ್ರಕಥೆಯನ್ನು ಪ್ರೇಕ್ಷಕರಿಗೆ ಓದಿ ಹೇಳಿದಂತಿದೆಯೇ ಹೊರತು ಆ ಧ್ವನಿಯಲ್ಲಿ ಜೀವವೇ ಇಲ್ಲ. ಯಾವ ಭಾವನೆಗಳನ್ನೂ ಪ್ರೇಕ್ಷಕರಿಗೆ ದಾಟಿಸಿಯೂ ಇಲ್ಲ. ಮಾವೀರನ ಧ್ವನಿ ಸತ್ಯನ ಪಾತ್ರದ ಮೂಲಕ ಮಾಡಿಸುವ ಕೆಲಸಗಳು ಕೂಡ ಅಷ್ಟೇನೂ ಪರಿಣಾಮಕಾರಿಯಾಗಿ ಚಿತ್ರಿತವಾಗಿಲ್ಲ. ನಾಯಕ ಸತ್ಯನ ಪಾತ್ರದಲ್ಲಿ ಹಿಂಜರಿಕೆ ವ್ಯಕ್ತವಾದಷ್ಟು ಸಹಜವಾಗಿ ರೋಷ ವ್ಯಕ್ತವಾಗಿಲ್ಲ. ಕಥೆ ಕೂಡ ದ್ವಿತಿಯಾರ್ಧದಲ್ಲಿ ಮೊನಚು ಕಳೆದುಕೊಂಡಿದೆ ಎನಿಸುತ್ತದೆ.
ಹಾಡುಗಳು ಮತ್ತು ಹಿನ್ನೆಲೆ ಸಂಗೀತ ಕೂಡ ತೀರಾ ಸಾಧಾರಣವಾಗಿದೆ. ನಾಯಕಿ ಪಾತ್ರ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದೆ. ಹಾಗೆ ನೋಡಲು ಹೋದರೆ ನಾಯಕನ ಪಾತ್ರವೇ ಅಲ್ಲಲ್ಲಿ ಸೊರಗಿದಂತಿದೆ. ಇನ್ನು cliche ಎನಿಸುವ ಚಿತ್ರದ climax ಕೂಡ ಅಂಥ ಏನೂ ವಿಶೇಷವಾಗಿಲ್ಲ. ಯೋಗಿ ಬಾಬು ಪಾತ್ರ ಊಟಕ್ಕಿಲ್ಲದ ಉಪ್ಪಿನಕಾಯಿ. ಚೆನ್ನಾಗಿದ್ದರೂ ಕಥೆಗೆ ಯಾವ ರೀತಿಯೂ ಪೂರಕವಾಗಿಲ್ಲ. ಇಷ್ಟೆಲ್ಲ ಆದರೂ ಚಿತ್ರ ಎಲ್ಲೂ ಬೋರ್ ಹೊಡೆಸದೇ ನೋಡಿಸಿಕೊಳ್ಳುತ್ತದೆ ಎನ್ನುವುದೂ ಹೌದು. ಸಂಕಲನ ಚುರುಕಾಗಿದೆ ಮತ್ತು ಅಲ್ಲಲ್ಲಿ ಚಂದ ಎನಿಸುವ ಭಾಗಗಳಿವೆ. ಶಿವಕಾರ್ತಿಕೇಯನ್ ಅವರ ಅಭಿನಯ ಎಂದಿನಂತೆ ಅಚ್ಚುಕಟ್ಟು. ಖಳನಟನ ಪಾತ್ರದಲ್ಲಿ ಮಿಸ್ಕಿನ್ ಅವರಿಗೆ ಫುಲ್ ಮಾರ್ಕ್ಸ್. ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ರಜನಿಕಾಂತ್ ಅವರ ‘ಕಾಲಾ’ ಚಿತ್ರದ ಹಾಸ್ಯಮಿಶ್ರಿತ fantasy version ಎನ್ನಬಹುದಾದ ಚಿತ್ರವಿದು. ‘ಮಾವೀರನ್’ ನೆಟ್‌ಫ್ಲಿಕ್ಸ್‌ನಲ್ಲಿ stream ಆಗುತ್ತಿದೆ.