ನಟ ರಜನೀಕಾಂತ್‌ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಕಾಲಿಗೆರಗಿದ್ದು ಸೋಷಿಯಲ್‌ ಮೀಡಿಯಾದಲ್ಲಿ ಪರ – ವಿರೋಧದ ಚರ್ಚೆಗೆ ಕಾರಣವಾಗಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿರುವ ರಜನೀಕಾಂತ್‌, ‘ಸನ್ಯಾಸಿ ಅಥವಾ ಯೋಗಿಯನ್ನು ಕಂಡಾಕ್ಷಣ ಅವರ ಕಾಲಿಗೆ ಬೀಳುವುದು ನನಗೆ ಅಭ್ಯಾಸ’ ಎಂದು ಪ್ರತಿಕ್ರಿಯಿಸಿದ್ದಾರೆ.

ನಟ ರಜನೀಕಾಂತ್‌ ಅವರು ಇತ್ತೀಚೆಗೆ ಲಕ್ನೋಗೆ ಭೇಟಿ ನೀಡಿದ್ದಾಗ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ 72ರ ಹರೆಯದ ರಜನೀಕಾಂತ್‌ ಅವರು ತಮಗಿಂತ ತುಂಬಾ ಕಿರಿಯ ವಯಸ್ಸಿನ ಆದಿತ್ಯನಾಥ್‌ ಅವರ ಕಾಲಿಗೆರಗಿದ್ದರು. ಈ ಫೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿ ಆ ಕುರಿತಂತೆ ಪರ – ವಿರೋಧದ ಚರ್ಚೆಗಳು ನಡೆದಿದ್ದವು. ನಟನ ಅಭಿಮಾನಿಗಳಲ್ಲೇ ಈ ನಡೆಯ ಬಗ್ಗೆ ಭಿನ್ನ ಅಭಿಪ್ರಾಯ ವ್ಯಕ್ತವಾಗಿದ್ದವು. ಈ ಕುರಿತಾಗಿ ಪತ್ರಿಕೆ ವರದಿಗಾರರೊಬ್ಬರು ರಜನೀಕಾಂತ್‌ ಅವರನ್ನು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರಜನೀಕಾಂತ್‌, ‘ಸನ್ಯಾಸಿ ಅಥವಾ ಯೋಗಿ ಯಾರೇ ಆಗಿರಲಿ, ಅವರ ಕಾಲಿಗೆರಗಿ ನಮಸ್ಕರಿಸುವುದು ನನಗೆ ಅಭ್ಯಾಸ. ಅದೇ ರೀತಿ ಆದಿತ್ಯನಾಥ್‌ ಅವರ ಕಾಲಿಗೆ ನಮಸ್ಕರಿಸಿದೆ’ ಎಂದಿದ್ದಾರೆ.

‘ಜೈಲರ್‌’ ಜಯಭೇರಿ | ರಜನೀಕಾಂತ್‌ ಅಭಿನಯದ ‘ಜೈಲರ್‌’ ಸಿನಿಮಾ ತೆರೆಕಂಡು ಹತ್ತು ದಿನಗಳ ನಂತರವೂ ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಹೊತ್ತಿಗೆ ಚಿತ್ರದ ಜಾಗತಿಕ ಬಾಕ್ಸ್‌ ಆಫೀಸ್‌ ವಹಿವಾಟು 500 ಕೋಟಿ ರೂಪಾಯಿ ದಾಟಿದೆ. ರಜನೀಕಾಂತ್‌ ಅವರ ಕಳೆದೆರೆಡು ಸಿನಿಮಾಗಳು ಬಾಕ್ಸ್‌ ಆಫೀಸ್‌ನಲ್ಲಿ ದೊಡ್ಡ ಸದ್ದು ಮಾಡಿರಲಿಲ್ಲ. ಅಲ್ಲದೆ ಈ ಚಿತ್ರಗಳ ಗುಣಮಟ್ಟದ ಬಗ್ಗೆಯೂ ಮಾತುಗಳು ಕೇಳಿಬಂದಿದ್ದವು. ಇದೀಗ ‘ಜೈಲರ್‌’ ಚಿತ್ರದ ದೊಡ್ಡ ಯಶಸ್ಸಿನೊಂದಿಗೆ ತಾವು ಈಗಲೂ ಬಾಕ್ಸ್‌ ಆಫೀಸ್‌ ಸುಲ್ತಾನ್‌ ಎನ್ನುವುದನ್ನು ರಜನೀಕಾಂತ್‌ ಸಾಬೀತು ಮಾಡಿದ್ದಾರೆ. ಶಂಕರ್‌ ನಿರ್ದೇಶನದಲ್ಲಿ ಅವರೇ ನಟಿಸಿದ್ದ ‘2.0’ ಸಿನಿಮಾದ ಒಟ್ಟು 723 ಕೋಟಿ ರೂಪಾಯಿ ವಹಿವಾಟು ದಾಖಲಿಸಿತ್ತು. ‘ಜೈಲರ್‌’ ಈ ದಾಖಲೆ ಮುರಿಯುವುದೇ ಎನ್ನುವುದನ್ನು ನೋಡಬೇಕಿದೆ.

LEAVE A REPLY

Connect with

Please enter your comment!
Please enter your name here