ಈ ಮಾದರಿಯ ಕತೆಗಳಲ್ಲಿ ಪಾತ್ರಗಳ ಸ್ವಭಾವದ ವಿನ್ಯಾಸದ ಬಗ್ಗೆ ಬಹಳ ಗಮನ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ವೀಕ್ಷಕರು ಯಾವ ಪಾತ್ರದ ಜೊತೆಗೂ ತಮ್ಮನ್ನು ಬೆಸೆದುಕೊಳ್ಳಲು ಅವಕಾಶ ಆಗುವುದಿಲ್ಲ. ಆ ನಿಟ್ಟಿನಲ್ಲಿ ಈ ಸರಣಿ ನಿರಾಸೆ ಮೂಡಿಸುತ್ತದೆ. ಪಾತ್ರಪೋಷಣೆ ದುರ್ಬಲವಾಗಿದೆ. ಮುಂದಿನ ಭಾಗದಲ್ಲಿ ಪ್ರೀತಿ ಪ್ರೇಮದ ಹೊರತಾಗಿ ಜಾಕಿಯ ಜೀವನದಲ್ಲಿ ಮಹತ್ತರವಾದದ್ದೇನೋ ನಡೆಯಬಹುದು ಎನ್ನುವ ಸೂಚನೆ ಕೊಟ್ಟು ಸರಣಿ ಅಂತ್ಯವಾಗುತ್ತದೆ. ‘ಮೈ ಲೈಫ್ ವಿತ್ ವಾಲ್ಟರ್ ಬಾಯ್ಸ್’ ಸರಣಿ Netflixನಲ್ಲಿ ಲಭ್ಯವಿದೆ.

ಅಲಿ ನೋವಾಕ್ ಅವರು ಬರೆದ ‘ಮೈ ಲೈಫ್ ವಿತ್ ವಾಲ್ಟರ್ ಬಾಯ್ಸ್’ ಪುಸ್ತಕವನ್ನು ಆಧರಿಸಿ ಅದೇ ಹೆಸರಿನಲ್ಲಿ ವೆಬ್ ಸರಣಿಯನ್ನು ಬಿಡುಗಡೆ ಮಾಡಲಾಗಿದೆ. ನ್ಯೂಯಾರ್ಕ್ ನಗರದ ಹದಿಹರೆಯದ ಹುಡುಗಿಯೊಬ್ಬಳು ಕೊಲರಾಡೋ ನಗರದ ರಾಂಚ್ ಕುಟುಂಬದೊಡನೆ ಹೋಗಿ ವಾಸಿಸುವ ಕಥೆ ಇದು. Netflix ಬಿಡುಗಡೆ ಮಾಡಿರುವ ಈ ಸರಣಿಯಲ್ಲಿ ಶಾಲೆಗೆ ಹೊಸದಾಗಿ ಬಂದಿರುವ ಹುಡುಗಿ ಜಾಕಿ ಪಾತ್ರಧಾರಿ ನಿಕ್ಕಿ ರಾಡ್ರಿಗ್ಸ್, ವಾಲ್ಟರ್ ಕುಟುಂಬದೊಡನೆ ಅವರ ಮನೆಯಲ್ಲಿ ವಾಸಿಸುತ್ತಿದ್ದಾಳೆ ಎಂಬ ವಿಚಾರ ಆಕೆಯ ಶಾಲೆಯಲ್ಲಿ ಸುದ್ದಿ ಮಾಡುತ್ತದೆ. ಗೆಳತಿ ಆಕೆಯನ್ನು ನೀನು ಎಲ್ಲರಿಗಿಂತ ಅದೃಷ್ಟಶಾಲಿ ಎಂದು ಹೇಳುತ್ತಾ, ‘ವಾಲ್ಟರ್ ಕುಟುಂಬ ಬರೀ ಮನೆಯಷ್ಟೇ ಅಲ್ಲ, ಗಂಡುಮಕ್ಕಳು ಇರುವ ಸ್ವರ್ಗ’ ಎಂದು ಬಣ್ಣಿಸುತ್ತಾಳೆ.

ಆದರೆ ಜಾಕಿಯ ಸ್ನೇಹಿತೆಗೆ ಜಾಕಿ ಯಾವ ಸಂದರ್ಭದಲ್ಲಿ ಆ ಮನೆಗೆ ಬಂದಳು ಎನ್ನುವ ವಿಚಾರವಾಗಲಿ ಅಥವಾ ಜಾಕಿಯ ತಂದೆತಾಯಿ ಕಾರು ಅಪಘಾತವೊಂದರಲ್ಲಿ ತೀರಿಕೊಂಡ ವಿಚಾರವಾಗಲಿ ತಿಳಿದಿರುವುದಿಲ್ಲ. ಹದಿವಯಸ್ಸಿನ ಅನಾಥ ಹುಡುಗಿಯೊಬ್ಬಳು ತನ್ನದೇ ವಯಸ್ಸಿನ ಆಸುಪಾಸಿನ ಸ್ಫುರದ್ರೂಪಿ ಗಂಡುಮಕ್ಕಳ ನಡುವೆ ಇರುವಾಗ ಆಕೆಯ ಮನಸ್ಸಿನಲ್ಲಿ, ಬದುಕಿನಲ್ಲಿ ಏನೇನು ನಡೆಯುತ್ತದೆ ಎನ್ನುವ ಕತೆ. ಹಗಲುಗನಸಿನಂಥ ವಾತಾವರಣ ಮತ್ತು ಭ್ರಮೆಗಳನ್ನು, ಆಸೆಗಳನ್ನು ಹುಟ್ಟಿಸಬಹುದಾಗಿದ್ದ ಕತೆ ಶುರುವಾಗುವುದಕ್ಕೆ ಮುನ್ನವೇ ತನ್ನ ನಿರ್ಜೀವ ಪಾತ್ರಗಳು ಮತ್ತು ನಿಧಾನಗತಿಯಿಂದಾಗಿ ಆಕರ್ಷಣೆ ಕಳೆದುಕೊಂಡಿದೆ.

ಇಡೀ ಸರಣಿಯಲ್ಲಿ ಎಲ್ಲಕ್ಕಿಂತ ಆಸಕ್ತಿ ಹುಟ್ಟಿಸುವ ಸನ್ನಿವೇಶ ಇರುವುದು ನ್ಯೂಯಾರ್ಕ್ ನಗರದಿಂದ ಬಲು ದೂರದ ಊರಾದ ಕೊಲರಾಡೋ ನಗರದ ಹೊರವಲಯದಲ್ಲಿ ವಾಸಿಸುವ ವಾಲ್ಟರ್ ಕುಟುಂಬಕ್ಕೆ ಬಂದು ಸೇರುವ ಜಾಕಿಯ ಆರಂಭಿಕ ಅನುಭವ. ಎತ್ತ ನೋಡಿದರಲ್ಲಿ ಅತ್ತ ಹದಿವಯಸ್ಸಿನ, ಆಕರ್ಷಕ ಗಂಡುಮಕ್ಕಳು ಮನೆಯ ತುಂಬಾ ಓಡಾಡಿಕೊಂಡಿರುತ್ತಾರೆ. ಒಟ್ಟು ಏಳು ಜನ ಅಣ್ಣತಮ್ಮಂದಿರು, ಅವರ ಸಂಬಂಧಿಗಳು ಇಬ್ಬರು ಗಂಡು ಹುಡುಗರು ಮತ್ತು ಸುಮಾರು ಹತ್ತು ವರ್ಷದ ಇವರೆಲ್ಲರ ತಂಗಿ ಇಷ್ಟೂ ಜನರು ಜಾರ್ಜ್ ಮತ್ತು ಕ್ಯಾತ್ರಿನ್‌ರ ಪ್ರೀತಿ ಮತ್ತು ಆರೈಕೆಯಲ್ಲಿ ಬೆಳೆಯುತ್ತಿರುತ್ತಾರೆ. ಆ ಒಂಬತ್ತು ಗಂಡುಹುಡುಗರಲ್ಲಿ ಆರು ಜನ ಜಾಕಿಯ ಜೊತೆ ಹೈಸ್ಕೂಲ್ ಓದುತ್ತಿರುತ್ತಾರೆ. ಅದರಲ್ಲಿ ಇಬ್ಬರು ಜಾಕಿಯನ್ನು ನೋಡಿದ ಕ್ಷಣದಿಂದಲೇ ಆಕೆಯ ಮೇಲೆ ಒಲವು ಬೆಳೆಸಿಕೊಳ್ಳುತ್ತಾರೆ.

ಹತ್ತು ಸಂಚಿಕೆಗಳ ಈ ಸರಣಿ ಬಹುತೇಕ ಜಾಕಿ ಮತ್ತು ಆ ಇಬ್ಬರ ಹುಡುಗರ ಸುತ್ತಲೇ ಸುತ್ತುತ್ತದೆ. ಆದರೆ ಜಾಕಿಯ ನಿರೀಕ್ಷೆಗೆ ತಕ್ಕಂತೆ ಇಬ್ಬರೂ ಇರದೇ ಅವಳಿಗೆ ಬಹಳ ನಿರಾಸೆಯಾಗುತ್ತದೆ. ಈ ತ್ರಿಕೋನ ಪ್ರೇಮಕತೆಯಲ್ಲಿ ಸುಮಾರು ಆಸಕ್ತಿಕರ ಅಂಶಗಳು ಇರಬಹುದಾಗಿದ್ದ ಅವಕಾಶ ಇದ್ದರೂ ಅದನ್ನು ಸರಿಯಾಗಿ ಬಳಸಿಕೊಳ್ಳಲಾಗಿಲ್ಲ. ಕೋಲ್ ಪಾತ್ರ ಬಹಳ ಒಡ್ದು ಒಡ್ಡಾಗಿದ್ದರೂ ಹೃದಯ ಮಾತ್ರ ಬಹಳ ಒಳ್ಳೆಯದು. ಆದರೆ ಆ ಒಳ್ಳೆಯತನ ಎಲ್ಲೂ ಯಾರ ಬಳಿಯೂ ಹೊರಬರದೇ ಎಲ್ಲರ ಜೊತೆ ಕೆಟ್ಟದಾಗಿ ವರ್ತಿಸುತ್ತಾ ಆತನ ಬಗ್ಗೆ ಎಲ್ಲರಿಗೂ ಕೆಟ್ಟ ಅಭಿಪ್ರಾಯ ಬರುವ ಹಾಗೆ ನಡೆದುಕೊಳ್ಳುತ್ತಿರುತ್ತಾನೆ. ಆಲೆಕ್ಸ್ ಒಳ್ಳೆಯ ಸ್ವಭಾವದ ಹುಡುಗ ಎನಿಸಿದರೂ ಆತನಲ್ಲಿ ಒಂದು ಅಪಾಯಕಾರಿ ಮಟ್ಟದ ಸ್ವಾನುಕಂಪ ಮನೆಮಾಡಿರುತ್ತದೆ. ಅವರಿಬ್ಬರಿಗೂ ಜಾಕಿಯ ಮೇಲೆ ಆಸೆ ಇದ್ದರೂ ಪರಸ್ಪರರ ನಡುವೆ ಇರುವ ವೈರತ್ವ ಮತ್ತು ಸಾಧಿಸಿಕೊಳ್ಳುವ ಕೆಚ್ಚು ಎಲ್ಲವನ್ನೂ ಮೀರಿ ನಿಂತಿರುತ್ತದೆ.

ಹೇಳಿಕೊಳ್ಳುವುದಕ್ಕೆ ಇದೊಂದು ಪ್ರೇಮಕತೆಯಾದರೂ ಎಲ್ಲೂ ಹೇಳಿಕೊಳ್ಳುವಂತ ಜೋಡಿಗಳೇ ಕತೆಯಲ್ಲಿ ಇಲ್ಲ. ಸಲಿಂಗಿಯಾದ ನೇತಾನ್ ತನ್ನ ಇಷ್ಟದ ಹುಡುಗ ಸ್ಕಯ್ಲಾರ್ ಬಳಿ ತನ್ನ ಪ್ರೇಮನಿವೇದನೆ ಮಾಡಿಕೊಳ್ಳುವ ಸನ್ನಿವೇಶದಲ್ಲಿ ಸ್ಕಯ್ಲಾರ್ ವರ್ತನೆ ಬಹಳ ಗೊಂದಲ ಹುಟ್ಟಿಸುವಂತಿದೆ. ಇನ್ನು ವಾಲ್ಟರ್ ಕುಟುಂಬದ ಹಿರಿಯ ಮಗನಾದ ವಿಲ್ ಸರಣಿಯುದ್ದಕ್ಕೂ ತನ್ನ ವೃತ್ತಿಗೆ ಮಹತ್ವ ಕೊಡುವ ನೆಪದಲ್ಲಿ ಪ್ರೇಯಸಿಯ ಬಳಿ ಸುಳ್ಳು ಹೇಳುತ್ತಾ ಆಕೆಯನ್ನು ನಿರ್ಲಕ್ಷಿಸುತ್ತಾ ಕೊನೆಗೊಂದು ದಿನ ಆಕೆ ಅವರಿಬ್ಬರ ನಡುವೆ ಮೂಡಿರುವ ಅಂತರವನ್ನು ಎತ್ತಿಹಿಡಿದಾಗ ಆಕೆಯದೇ ತಪ್ಪೇನೋ ಎನಿಸುವಂತೆ ಅವಳ ಮೇಲೆ ಗೂಬೆ ಕೂರಿಸುತ್ತಾನೆ. ಇರುವುದರಲ್ಲಿ ಜಾಕಿ ಮತ್ತು ಏರಿನ್ ನಡುವಿನ ಸನ್ನಿವೇಶಗಳು ತುಸು ಅರ್ಥಪೂರ್ಣವಾಗಿ ಮೂಡಿಬಂದಿವೆ.

ಈ ಮಾದರಿಯ ಕತೆಗಳಲ್ಲಿ ಪಾತ್ರಗಳ ಸ್ವಭಾವದ ವಿನ್ಯಾಸದ ಬಗ್ಗೆ ಬಹಳ ಗಮನ ನೀಡಬೇಕಾಗುತ್ತದೆ. ಇಲ್ಲವಾದಲ್ಲಿ ವೀಕ್ಷಕರು ಯಾವ ಪಾತ್ರದ ಜೊತೆಗೂ ತಮ್ಮನ್ನು ಬೆಸೆದುಕೊಳ್ಳಲು ಅವಕಾಶ ಆಗುವುದಿಲ್ಲ. ಆ ನಿಟ್ಟಿನಲ್ಲಿ ಈ ಸರಣಿ ನಿರಾಸೆ ಮೂಡಿಸುತ್ತದೆ. ಪಾತ್ರಪೋಷಣೆ ಬಹಳವೇ ದುರ್ಬಲವಾಗಿದೆ. ಸರಣಿ ಮುಗಿದ ಬಳಿಕ ಯಾವ ಪಾತ್ರವೂ ತಲೆಯಲ್ಲಿ ನಿಲ್ಲುವುದಿಲ್ಲ. ಯಾವ ಘಟನೆಯೂ ಮನಸ್ಸಿಗೆ ತಟ್ಟುವುದಿಲ್ಲ. ಆದರೆ ಇದರಲ್ಲಿ ತೋರಿಸಿರುವ ಅಮೇರಿಕ ದೇಶದ ಗ್ರಾಮೀಣ ಪ್ರದೇಶದ ಚಿತ್ರಣ ಸುಂದರವಾಗಿದೆ. ತುಂಬು ಕುಟುಂಬದಲ್ಲಿ ನಡೆಯುವ ಚಿಕ್ಕ ಚಿಕ್ಕ ಗಲಾಟೆ, ಗೊಂದಲ, ನಿತ್ಯದ ಕೋಲಾಹಲಗಳು, ಸಮಸ್ಯೆಗಳು, ನಗು, ಖುಷಿ, ಜಗಳ ಇವುಗಳ ಚಿತ್ರಣ ಚೆನ್ನಾಗಿ ಮೂಡಿಬಂದಿದೆ. ದೊಡ್ಡ ನಗರದಲ್ಲಿ ಬೆಳೆದ ಹುಡುಗಿಯೊಬ್ಬಳು ತುಂಬು ಕುಟುಂಬದ ಗ್ರಾಮೀಣ ಪರಿಸರದಲ್ಲಿ ಹೇಗೆ ಹೊಂದಿಕೊಳ್ಳುತ್ತಾಳೆ ಎನ್ನುವುದರ ಚಿತ್ರಣ ಚೆನ್ನಾಗಿದೆ.

ಸರಣಿ ಮುಗಿದಾಗ ಅನ್ನಿಸುವುದು ಯಾವ ಸಂಬಂಧವೂ ಒಂದು ಜಗಳಕ್ಕೋ, ಮುನಿಸಿಗೋ, ಮನಸ್ತಾಪಕ್ಕೋ ಮುಗಿದುಬಿಡುವಂತದ್ದಲ್ಲ. ಒಂದು ಸಣ್ಣ ಕ್ಷಮೆ ಎಷ್ಟೋ ಸತ್ತ ಸಂಬಂಧಗಳನ್ನು ಮತ್ತೆ ಬದುಕಿಸಬಹುದು. ಧೈರ್ಯ ಮತ್ತು ಪ್ರೀತಿ ಎರಡು ಇದ್ದರೆ ಎಷ್ಟೋ ನಿರ್ಜೀವ ಸಂಬಂಧಗಳು ಮತ್ತೆ ಉಸಿರಾಡಬಹುದು. ಮುಂದಿನ ಭಾಗದಲ್ಲಿ ಪ್ರೀತಿ ಪ್ರೇಮದ ಹೊರತಾಗಿ ಜಾಕಿಯ ಜೀವನದಲ್ಲಿ ಮಹತ್ತರವಾದದ್ದೇನೋ ನಡೆಯಬಹುದು ಎನ್ನುವ ಸೂಚನೆ ಕೊಟ್ಟು ಸರಣಿ ಅಂತ್ಯವಾಗುತ್ತದೆ. ‘ಮೈ ಲೈಫ್ ವಿತ್ ವಾಲ್ಟರ್ ಬಾಯ್ಸ್’ ಸರಣಿ Netflixನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here