ನಿರ್ದೇಶಕರಾದ ಅನನ್ಯಾ ಬ್ಯಾನರ್ಜಿ ಮತ್ತು ಗೌರವ್‌ ಕೆ ಚಾವ್ಲಾ ಇಲ್ಲಿ ಲಾರೆನ್ಸ್ ಸ್ಕೂಲ್‌ನ ವಾತಾವರಣವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಸಮರ್ಥರಾಗಿದ್ದರೂ, ಏಳು ಸಂಚಿಕೆಗಳು ಅಲ್ಲಲ್ಲಿ ಡಲ್ ಆಗಿ ಹಿಡಿದು ಎಳೆದಂತೆ ಕಾಣುತ್ತದೆ. ಒಳಗೊಳಗೆ ಬರುವ ಇತರ ಕತೆಗಳು ಅಷ್ಟು ಹಿಡಿಸುವುದಿಲ್ಲ. ಪ್ರೇಕ್ಷಕರನ್ನು ಬೆಚ್ಚಿಬೀಳಿಸಲೇಬೇಕು ಎಂಬಂತೆ ಕೆಲವೊಂದು ದೃಶ್ಯಗಳನ್ನು ತುರುಕಲಾಗಿದೆ. ‘ಅಧೂರಾ’ ಹಿಂದಿ ವೆಬ್‌ ಸರಣಿ Prime Videoದಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಬೋರ್ಡಿಂಗ್ ಶಾಲೆಯ ಸುತ್ತ ಗಿಡಮರಗಳಿಂದ ಕೂಡಿದ ಪರಿಸರ, ಇಂಥಾ ಬೋರ್ಡಿಂಗ್ ಸ್ಕೂಲ್‌ನಲ್ಲಿರುವ ಹದಿಹರೆಯದ ಮಕ್ಕಳ ಸ್ವಭಾವ, ಆಘಾತದ ಬಗ್ಗೆ ತೋರಿಸುವ ಮೂಲಕ ‘ಅಧೂರಾ’ ವೆಬ್ ಸಿರೀಸ್ ಆರಂಭವಾಗುತ್ತದೆ. ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿರುವ ಪ್ರಸ್ತುತ ಸರಣಿಯ ನಿರೂಪಣೆಯನ್ನು ಎರಡು ಟೈಮ್‌ಲೈನ್‌ಗಳಲ್ಲಿ ವಿಭಜಿಸಲಾಗಿದೆ. ಸದ್ಯ ವಿದೇಶದಲ್ಲಿ ಕಾಲೇಜು ಪ್ರಾಧ್ಯಾಪಕನಾಗಿರುವ ಅಧಿರಾಜ್ (ಇಶ್ವಾಕ್ ಸಿಂಗ್) ತನ್ನ ಹೈಸ್ಕೂಲ್ ಮುಗಿಸಿದ ಹದಿನೈದನೇ ವಾರ್ಷಿಕೋತ್ಸವವನ್ನು ತನ್ನ ಬ್ಯಾಚ್- ಮೇಟ್‌ಗಳೊಂದಿಗೆ ಆಚರಿಸಲು ಶಾಲೆಗೆ ಮರಳಿ ಬರುತ್ತಾನೆ. ಅವರಲ್ಲಿ ಅನೇಕರು ವರ್ಷಗಳಿಂದ ಭೇಟಿಯಾಗಿಲ್ಲ. ಒಬ್ಬರನ್ನೊಬ್ಬರು ನೋಡುವ ಕಾತರ. ತನ್ನ ಆತ್ಮೀಯ ಸ್ನೇಹಿತ ನಿನಾದ್ (ಪೂಜನ್ ಛಾಬ್ರಾ) ಶಾಲೆಯ ಕೊನೆಯ ದಿನದ ನಂತರ ನಿಗೂಢವಾಗಿ ಕಣ್ಮರೆಯಾಗಿದ್ದಾನೆ. ರೀಯೂನಿಯನ್ ದಿನದಂದೂ ನಿನಾದ್‌ಗಾಗಿ ಹುಡುಕುತ್ತಿರುವಾಗ, ಅದೇ ಶಾಲೆಯಲ್ಲಿ ತೊಂದರೆಗೀಡಾದ 10 ವರ್ಷದ ವಿದ್ಯಾರ್ಥಿ ವೇದಾಂತ್ ಮಲಿಕ್ (ಶ್ರೇನಿಕ್ ಅರೋರಾ) ಕಣ್ಣಿಗೆ ಬೀಳ್ತಾನೆ. ಆತ ತನ್ನ ಸ್ನೇಹಿತನನ್ನು ನೆನಪಿಸುತ್ತಾನೆ. ಸ್ವಲ್ಪ ಸಮಯದ ನಂತರ, ಭೂತಕಾಲ ಮತ್ತು ವರ್ತಮಾನದ ನಡುವೆ ಘರ್ಷಣೆ, ಒಂದು ಕರಾಳ ರಹಸ್ಯವು ಅಧಿರಾಜ್ ಮತ್ತು ವೇದಾಂತ್ ಅವರನ್ನು ಒಟ್ಟಿಗೆ ಬಂಧಿಸುತ್ತದೆ.

ಫ್ಲಾಶ್‌ಬ್ಯಾಕ್‌ನಲ್ಲಿ, ಹದಿಹರೆಯದ ಅಧಿರಾಜ್ ಆ ಶಾಲೆಯಲ್ಲಿರುವ ಏಕೈಕ ವಿದ್ಯಾರ್ಥಿನಿ, ತನ್ನ ಬ್ಯಾಚ್‌ಮೇಟ್‌ ಮಾಳವಿಕಾಳ ಜತೆ ಪ್ರೀತಿಯಲ್ಲಿದ್ದ. ಶಾಲಾದಿನಗಳು ಮುಗಿಯುವುದರೊಂದಿಗೆ ಅವರದ್ದು ಬ್ರೇಕ್‌ಅಪ್‌ ಕೂಡಾ ಆಗುತ್ತದೆ. ಇನ್ನೊಬ್ಬ ಗೆಳೆಯ ನಿನಾದ್. ಆತ್ಮೀಯ ಗೆಳೆಯನಾಗಿದ್ದ ಆತ ಈಗ ಎಲ್ಲಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ. ಅಧಿರಾಜ್‌ನ ಕಣ್ಣುಗಳು ಗೆಳೆಯನನ್ನೇ ಹುಡುಕುತ್ತಿರುತ್ತದೆ.

2007ರ ಬ್ಯಾಚ್‌ನ ರೀಯೂನಿಯನ್‌ಗೆ ಶಾಲೆಯಲ್ಲಿ ಎಲ್ಲ ಸಿದ್ದತೆಗಳು ನಡೆಯುತ್ತಿರುತ್ತವೆ. ಈ ಹೊತ್ತಲ್ಲೇ ಈಗ ಅದೇ ಶಾಲೆಯಲ್ಲಿ ಕಲಿಯುತ್ತಿರುವ ಎಳೆ ಹುಡುಗ ವೇದಾಂತ್‌ನ ಕತೆಯನ್ನು ತರಲಾಗಿದೆ. ಶಾಲೆಯಲ್ಲಿ ಸಹಪಾಠಿಗಳಿಂದ ನಿರಂತರ ಕಿರುಕುಳಕ್ಕೊಳಾಗುತ್ತಿದ್ದ ವೇದಾಂತ್ ದೇಹದಲ್ಲಿ ಪ್ರೇತಾತ್ಮ ಸೇರಿಕೊಂಡಿದೆ ಎಂದು ತೋರಿಸಲಾಗಿದೆ. ವೇದಾಂತ್‌ನ ವಿಚಿತ್ರ ನಡವಳಿಕೆಯ ಬಗ್ಗೆ ಅಧ್ಯಾಪಕರೂ ಚಿಂತಿತರಾಗುತ್ತಾರೆ. ಮುಖ್ಯೋಪಾಧ್ಯಾಯರು ವೇದಾಂತ್‌ನನ್ನು ಆತನ ಹೆತ್ತವರೊಂದಿಗೆ ಕಳುಹಿಸಲು ಪ್ರಯತ್ನ ಮಾಡುವುದು ಕಾಣುತ್ತದೆ. ಆದರೆ ಹೆತ್ತವರು ಇದಕ್ಕೆ ಒಪ್ಪುವುದಿಲ್ಲ. ರೀಯೂನಿಯನ್ ಬರ್ತಿದೆ, ಹಾಗಾಗಿ ವೇದಾಂತ್ ಯಾರ ಕಣ್ಣಿಗೂ ಬೀಳದಂತೆ ದೂರವಿರಿಸುವ ತೀರ್ಮಾನ ಕೈಗೊಳ್ಳುತ್ತದೆ ಅಲ್ಲಿನ ಶಿಕ್ಷಕ ವರ್ಗ. ವೇದಾಂತ್ ಕ್ಯಾಂಪಸ್‌ನಲ್ಲಿ ಮಾಡುವ ಕೃತ್ಯಗಳು ಆಗಾಗ ಬೆಚ್ಚಿ ಬೀಳಿಸುತ್ತವೆ. ಸಹಪಾಠಿಗಳ ಲೇವಡಿ, ಕಿರುಕುಳದ ಜತೆಗೆ ಶಾಲೆಯ ಅಧ್ಯಾಪಕರು ಅವನನ್ನು ದೊಡ್ಡ ತಲೆನೋವು ಎಂದೇ ಭಾವಿಸಿಬಿಟ್ಟಿದ್ದಾರೆ. ಅವನ ಪೋಷಕರು ಕೂಡಾ ಅವನ ಬಗ್ಗೆ ಕಾಳಜಿ ವಹಿಸುವುದಿಲ್ಲ. ಇಲ್ಲಿ ಹೆತ್ತವರು ಮಕ್ಕಳನ್ನು ದೂರವಿರಿಸುವುದು, ಪರಕೀಯತೆ ಮತ್ತು ನಿರ್ಲಕ್ಷ್ಯದಂತಹ ಪ್ರಮುಖ ವಿಷಯಗಳನ್ನು ‘ಅಧೂರಾ’ ಹೈಲೈಟ್ ಮಾಡುತ್ತದೆ.

ನಿರ್ದೇಶಕರಾದ ಅನನ್ಯಾ ಬ್ಯಾನರ್ಜಿ ಮತ್ತು ಗೌರವ್‌ ಕೆ ಚಾವ್ಲಾ ಇಲ್ಲಿ ಲಾರೆನ್ಸ್ ಸ್ಕೂಲ್‌ನ ವಾತಾವರಣವನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಲು ಸಮರ್ಥರಾಗಿದ್ದರೂ, ಏಳು ಸಂಚಿಕೆಗಳು ಅಲ್ಲಲ್ಲಿ ಡಲ್ ಆಗಿ ಹಿಡಿದು ಎಳೆದಂತೆ ಕಾಣುತ್ತದೆ. ಒಳಗೊಳಗೆ ಬರುವ ಇತರ ಕತೆಗಳು ಅಷ್ಟು ಹಿಡಿಸುವುದಿಲ್ಲ. ಪ್ರೇಕ್ಷಕರನ್ನು ಬೆಚ್ಚಿಬೀಳಿಸಲೇಬೇಕು ಎಂಬಂತೆ ಕೆಲವೊಂದು ದೃಶ್ಯಗಳನ್ನು ತುರುಕಲಾಗಿದೆ.

2007ರ ಬ್ಯಾಚ್‌ನ ಸದಸ್ಯರು ಇಂದಿನ ಟೈಮ್‌ಲೈನ್‌ನಲ್ಲಿ ಸತ್ತುಬೀಳುತ್ತಿದ್ದಂತೆ ಅಧಿರಾಜ್ ಸತ್ಯದ ಅನ್ವೇಷಣೆಗೆ ಹೊರಟು ನಿಲ್ಲುತ್ತಾನೆ. ಜೊತೆಗೆ ಅದೇ ಶಾಲೆಯ ಸುಪ್ರಿಯಾ (ರಸಿಕಾ ದುಗ್ಗಲ್ ) ಎಂಬ ಸೈಕಾಲಜಿಸ್ಟ್, ಆಪ್ತ ಸಮಾಲೋಚಕಿ ಕೂಡಾ ಸಾಥ್ ನೀಡುತ್ತಾರೆ. ಕತ್ತಲೆಯ ಭಯ ಇರುವ ಅಧಿರಾಜ್‌ನನ್ನು ಇಲ್ಲಿ ನೋಡಲು ಕಿರಿಕಿರಿ ಅನಿಸದೇ ಇರದು. ಹಾರರ್ ಕತೆ ಎಂಬುದನ್ನು ತೋರಿಸುವುದಕ್ಕಾಗಿ ನಿರ್ದೇಶಕರಿಬ್ಬರೂ ಅಸಾಮಾನ್ಯ ತಾಳ್ಮೆಯೊಂದಿಗೆ ದೃಶ್ಯಗಳನ್ನು ಕಟ್ಟಿಕೊಟ್ಟಿದ್ದಾರೆ. ಕೆಲವೊಂದು ಕಡೆ ಸಂಭಾಷಣೆಗಳೇ ಮುಂದೇನಾಗುತ್ತದೆ ಎಂಬುದನ್ನು ಸುಲಭವಾಗಿ ಹೇಳಿಬಿಡುತ್ತದೆ. ಉದಾಹರಣೆಗೆ ಶಾಲಾ ದಿನಗಳ ಫ್ಲಾಶ್‌ಬ್ಯಾಕ್ ತೋರಿಸುವಾಗ ಮಾಳವಿಕಾ, ಅಧಿರಾಜ್ ಪಕ್ಕ ಬಂದು ನನ್ನಲ್ಲಿ ಹೇಳದೆಯೇ ಅಮೆರಿಕದ ಕಾಲೇಜಿಗೆ ಅರ್ಜಿ ಹಾಕಿದ್ದಿ ಅಲ್ಲವಾ ಎಂದು ಹೇಳುತ್ತಾಳೆ. ಆತ ಅಲ್ಲಿಂದ ಅಮೆರಿಕಾಗೆ ಹಾರುತ್ತಾನೆ ಎಂಬುದು ಇಲ್ಲಿ ಗೊತ್ತಾಗಿಬಿಡುತ್ತದೆ. ಹದಿಹರೆಯದ ಪ್ರಣಯ ಅದು. ಆಕೆ ಆತನ ಕೆನ್ನೆಗೆ ಮುತ್ತುಕೊಟ್ಟಾಗ, ನಿಮ್ಮ ಅಪ್ಪ ಇಲ್ಲಿರಬಹುದು. ಅವರ ಕಾರಣದಿಂದಲೇ ಈ ಶಾಲೆಯಲ್ಲಿ ಎಲ್ಲ ಹುಡುಗರ ಜತೆ ಏಕೈಕ ವಿದ್ಯಾರ್ಥಿನಿ ಆಗಿ ನಿನಗೆ ಓದಬೇಕಾಗಿ ಬಂತು ಎಂದು ಅಧಿರಾಜ್ ಹೇಳಿ ಬಿಡುತ್ತಾನೆ. ಆ ಬ್ಯಾಚ್‌ನಲ್ಲಿ ಮಾಳವಿಕಾ ಎಂಬ ಏಕೈಕ ವಿದ್ಯಾರ್ಥಿನಿ ಯಾಕೆ ಇದ್ದಾಳೆ ಎಂಬುದು ಈ ಸಂಭಾಷಣೆಯಿಂದಲೇ ಗೊತ್ತಾಯ್ತು.

ತಿಂಗಳ ಹಿಂದೆಯಷ್ಟೇ ಬೋರ್ಡಿಂಗ್ ಸ್ಕೂಲ್‌ನ ಕತೆ ಹೇಳುವ ಸ್ಕೂಲ್ ಆಫ್ ಲೈಸ್ ತೆರೆಕಂಡಿತ್ತು. ಆದರೆ ಇಲ್ಲಿ ಅಲ್ಲಿದ್ದಂತೆ ಗಟ್ಟಿ ನಿರೂಪಣೆ ಇಲ್ಲ. ಅಧಿರಾಜ್ ಆತಂಕಗೊಂಡಿದ್ದಾನೆ. ನಿನಾದ್ ಜತೆಗೆ ಏನಾಯಿತು ಎಂಬುದರ ಬಗ್ಗೆ ಆತ ವಿಷಾದಿಸುತ್ತಾನೆ. ಪ್ರತಿಯೊಂದು ದೃಶ್ಯವು ಕಥಾವಸ್ತುವನ್ನು ಮುಂದಕ್ಕೆ ಕರೆದೊಯ್ಯಲು ಶ್ರಮಿಸಿದರೂ ಅಲ್ಲಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತದೆ. ನಿನಾದ್ ನಿಗೂಢವಾಗಿ ಕಾಣೆಯಾಗಿದ್ದಾನೆ. ಆದರೆ ಸಂಕೀರ್ಣವಾದ ವಿಷಯವನ್ನು ಪರಿಹರಿಸಲು ಅವನು ಸಹಾಯ ಮಾಡುತ್ತಾನೆಯೇ?

ಎರಡು ಟೈಮ್‌ಲೈನ್‌ಗಳ ಮೂಲಕ ಸಮಯ ಹಿಂದಕ್ಕೆ ಮತ್ತು ಮುಂದಕ್ಕೆ ಹೋಗುವಾಗ, ‘ಅಧೂರಾ’, ಸಂಕೀರ್ಣವಾಗಿದ್ದರೂ. ರಹಸ್ಯ ಮತ್ತು ಅಜ್ಞಾತ ಭಯಗಳ ಅನುಭವವನ್ನು ಇದು ಪ್ರೇಕ್ಷಕರಿಗೆ ನೀಡುತ್ತದೆ. ಸುಮಾರು 45 ನಿಮಿಷಗಳ ಎಂಟು ಭಾಗಗಳ ಸರಣಿ ವೀಕ್ಷಕರ ತಾಳ್ಮೆಯನ್ನು ಪರೀಕ್ಷಿಸುತ್ತದೆ. ಜಾನ್ ಸ್ಟೀವರ್ಟ್ ಎಡೂರಿ ಅವರ ಸಂಗೀತ ಮತ್ತು ಊಟಿಯ ಸುಂದರವಾದ ಮತ್ತು ಕತ್ತಲೆಯ ಓಣಿಗಳನ್ನು ತೋರಿಸಿದ ಸೃಜನ್ ಚೌರಾಸಿಯಾ ಅವರ ಛಾಯಾಗ್ರಹಣವು ಸರಣಿಯನ್ನು ಚಂದಗಾಣಿಸಿದೆ. ಮಾಹಿರ್ ಝವೇರಿಯವರ ಸಂಕಲನವೂ ಶ್ಲಾಘನೀಯ. ನೀವು ಸೂಪರ್ ನ್ಯಾಚುರಲ್ ಹಾರರ್ ಥ್ರಿಲ್ಲರ್ ಇಷ್ಟಪಡುವವರಾದರೆ ಈ ಸರಣಿ ಖಂಡಿತಾ ನಿಮಗಿಷ್ಟವಾಗುತ್ತದೆ.

Previous article‘ಮಂಗಳವಾರಂ’ ಟೀಸರ್‌ | ಅಜಯ್‌ ಭೂಪತಿ ನಿರ್ದೇಶನದ ಹಾರರ್‌ – ಥ್ರಿಲ್ಲರ್‌ ಸಿನಿಮಾ
Next articleಕರಣ್‌ ಜೋಹರ್‌ಗೆ IFFM ಗೌರವ | ನಿರ್ಮಾಪಕನ ವೃತ್ತಿ ಬದುಕಿಗೆ ಬೆಳ್ಳಿಮಹೋತ್ಸವದ ಸಂಭ್ರಮ

LEAVE A REPLY

Connect with

Please enter your comment!
Please enter your name here