ರಜನೀಕಾಂತ್ ಪುತ್ರಿ ಐಶ್ವರ್ಯಾ ಧನುಷ್ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್‌ನ ಈ ತೆಲುಗು – ತಮಿಳು ದ್ವಿಭಾಷಾ ಸಿನಿಮಾ ಸದ್ಯದಲ್ಲೇ ಸೆಟ್ಟೇರಲಿದೆ.
ಜನಪ್ರಿಯ ತಮಿಳು ನಟ ರಜನೀಕಾಂತ್ ಪುತ್ರಿ, ನಟ ಧನುಷ್ ಪತ್ನಿ ಐಶ್ವರ್ಯಾ ಆರು ವರ್ಷಗಳ ನಂತರ ನಿರ್ದೇಶನಕ್ಕೆ ಮರಳುತ್ತಿದ್ದಾರೆ. ತಮಿಳು ಚಿತ್ರರಂಗದ ಮುಂಚೂಣಿ ಚಿತ್ರನಿರ್ಮಾಣ ಸಂಸ್ಥೆಗಳಲ್ಲೊಂದಾದ ಲೈಕಾ ಪ್ರೊಡಕ್ಷನ್ಸ್ ಈ ಸಿನಿಮಾ ನಿರ್ಮಿಸಲಿದೆ. ತಮಿಳು – ತೆಲುಗು ದ್ವಿಭಾಷೆಗಳಲ್ಲಿ ನಿರ್ಮಾಣವಾಗಲಿರುವ ಚಿತ್ರಕ್ಕೆ ಸಂಜೀವ್ ಕುಮಾರ್ ಕತೆ ರಚಿಸಿದ್ದಾರೆ. ಇದೊಂದು ಥ್ರಿಲ್ಲರ್ ಎನ್ನಲಾಗಿದ್ದು ತಾರಾಬಳಗ ಮತ್ತು ತಂತ್ರಜ್ಞರ ಆಯ್ಕೆ ಜಾರಿಯಲ್ಲಿದೆ.
2012ರಲ್ಲಿ ‘3’ ತಮಿಳು ಚಿತ್ರದೊಂದಿಗೆ ಐಶ್ವರ್ಯಾ ನಿರ್ದೇಶಕಿಯಾಗಿ ಸಿನಿಮಾರಂಗಕ್ಕೆ ಪರಿಚಯವಾಗಿದ್ದರು. ಅವರ ಪತಿ ಧನುಷ್ ನಟಿಸಿದ್ದ ಸಿನಿಮಾ ವಿಶ್ಲೇಷಕರ ಮೆಚ್ಚುಗೆಗೆ ಪಾತ್ರವಾಗಿತ್ತು. 2015ರಲ್ಲಿ ಅವರು ‘ವಾಯ್ ರಾಜಾ ವಾಯ್’ ತಮಿಳು ಚಿತ್ರ ನಿರ್ದೇಶಿಸಿದ್ದರು. ಈ ಪ್ರಯೋಗಕ್ಕೆ ವಿಶ್ಲೇಷಕರು ಮಾತ್ರವಲ್ಲದೆ ಸಿನಿಪ್ರೇಕ್ಷಕರಿಂದಲೂ ಅಪಾರ ಬೆಂಬಲ ವ್ಯಕ್ತವಾಗಿತ್ತು. 2017ರಲ್ಲಿ ಅವರು ‘ಸಿನಿಮಾ ವೀರನ್’ ಸಾಕ್ಷ್ಯಚಿತ್ರ ನಿರ್ದೇಶಿಸಿದ್ದರು. ತಮಿಳು ಚಿತ್ರರಂಗಕ್ಕೆ ಕೆಲಸ ಮಾಡಿದ ಸಾಹಸ ನಿರ್ದೇಶಕರ ಕುರಿತ ಈ ಡಾಕ್ಯುಮೆಂಟರಿಯನ್ನು ಉದ್ಯಮದ ಮಂದಿ ಬಹುವಾಗಿ ಮೆಚ್ಚಿಕೊಂಡಿದ್ದರು. ಇದೀಗ ಅವರು ಥ್ರಿಲ್ಲರ್ ಕತೆಯೊಂದಿಗೆ ನಿರ್ದೇಶನಕ್ಕೆ ಮರಳುತ್ತಿದ್ದಾರೆ.
‘ಪೊನ್ನಿಯನ್ ಸೆಲ್ವನ್’, ‘ಡಾನ್’ನಂತರ ದೊಡ್ಡ ಸಿನಿಮಾಗಳನ್ನು ನಿರ್ಮಿಸಿರುವ ಲೈಕಾ ಪ್ರೊಡಕ್ಷನ್ಸ್ ಹೊಸ ಚಿತ್ರವನ್ನೂ ದುಬಾರಿ ಬಜೆಟ್‌ನಲ್ಲಿ ನಿರ್ಮಿಸುವ ಯೋಜನೆ ಹಾಕಿಕೊಂಡಿದೆ. “ಈಗಾಗಲೇ ತಮಿಳಿನಲ್ಲಿ ನಾವು ಸಿನಿಮಾ ನಿರ್ಮಿಸಿದ್ದರೂ ತೆಲುಗಿನಲ್ಲಿ ಇದು ನಮಗೆ ಮೊದಲ ಪ್ರಾಜೆಕ್ಟ್. ಪ್ರತಿಭಾವಂತ ನಿರ್ದೇಶಕಿ ಐಶ್ವರ್ಯಾ ಸಾರಥ್ಯದಲ್ಲಿ ತಯಾರಾಗಲಿರುವ ಈ ದ್ವಿಭಾಷಾ ಸಿನಿಮಾ ದೇಶದ ಸಿನಿಪ್ರಿಯರನ್ನು ರಂಜಿಸಲಿದೆ” ಎಂದು ಲೈಕಾ ಪ್ರೊಡಕ್ಷನ್ಸ್ ಸಂಸ್ಥೆ ಹೇಳಿಕೊಂಡಿದೆ. ಮತ್ತೊಂದೆಡೆ ನಿರ್ದೇಶಕ ಐಶ್ವರ್ಯಾ, “ಪ್ಯಾನ್ ಇಂಡಿಯಾ ಆಡಿಯನ್ಸ್ ಗಮನದಲ್ಲಿಟ್ಟುಕೊಂಡು ಕತೆ ಮಾಡಿದ್ದೇವೆ. ನಿರ್ಮಾಪಕರ ಅಭಿರುಚಿ ಮತ್ತು ಸಹಕಾರದಿಂದಾಗಿ ಇದೊಂದು ಉತ್ತಮ ಎಂಟರ್‌ಟೇನರ್ ಆಗಿ ರೂಪುಗೊಳ್ಳುವ ಭರವಸೆ ಇದೆ” ಎಂದಿದ್ದಾರೆ.