ನಮ್ಮ ನಿಮ್ಮೊಳಗೂ ಒಂದು ಅದ್ಭುತ ದೀಪದ ಕಲ್ಪನೆ ಇರಬಹುದು. ಒಬ್ಬ ಪಾಚು ಇರಬಹುದು. ಅದ್ಭುತ ದೀಪದ ಕಲ್ಪನೆ ವಾಸ್ತವದಲ್ಲಿ ನಿಜವಾಗಿಬಿಟ್ಟರೆ ನಮ್ಮ ನಿಮ್ಮೊಳಗಿನ ಪಾಚು ಏನು ಮಾಡಬಹುದು ಎಂದು ಒಮ್ಮೆ ಸಣ್ಣಗೆ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡುತ್ತದೆ ಈ ‘ಪಾಚುವುಮ್ ಅದ್ಭುತ ವಿಳಕ್ಕುಮ್’. ಅಖಿಲ್‌ ಸತ್ಯನ್‌ ನಿರ್ದೇಶನದ ಮಲಯಾಳಂ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

ಅದ್ಭುತ ದೀಪ ಅಂದರೆ ಮನಸ್ಸಿಗೆ ಬರೋದು ಅಲ್ಲಾವುದ್ದೀನನ ಅದ್ಭುತ ದೀಪದ ಕಥೆ . ಅದ್ಭುತ ದೀಪ ಅಂದಾಕ್ಷಣ ಒಂದು ಮಾಯಾಲೋಕದ ಕಲ್ಪನೆ ನಮ್ಮ ಮನಸ್ಸಿಗೆ ಬರುತ್ತೆ ಅಲ್ಲವೇ. ಒಬ್ಬೊಬ್ಬರ ಮಾಯಾಲೋಕದ ಕಲ್ಪನೆಯೂ ಒಂದೊಂದು ಥರ. ಕೇಳಿದ್ದೆಲ್ಲ ಕೊಡುವ ಅದ್ಭುತ ದೀಪ ನಮಗೋ ನಿಮಗೋ ಸಿಕ್ಕರೆ ಹೇಗಿರಬಹುದು ಅಲ್ಲವೇ!?

ಪಾಚು ಅನ್ನುವ ಸಾಮಾನ್ಯ ಯುವಕನೊಬ್ಬನ ಅದ್ಭುತ ದೀಪದೊಂದಿಗಿನ ಪಯಣವೇ ಈ ಸಿನಿಮಾ. ಪಾಚು ಈ ಚಿತ್ರದ ನಾಯಕ. ಎಲ್ಲ ಸಿನಿಮಾಗಳಲ್ಲಿ ಕಾಣಸಿಗುವಂತಹ ಅಸಾಧಾರಣ ನಾಯಕ ಅಲ್ಲ. ನಮ್ಮ ನಿಮ್ಮಂತೆ ಸಾಧಾರಣ ಕನಸುಗಳಿರುವ ಒಬ್ಬ ಸಾಮಾನ್ಯ ಯುವಕ. ಆದರೆ ಎಂತಹ ಸಾಮಾನ್ಯನೊಳಗೂ ಒಂದು ಅಸಾಮಾನ್ಯವಾದ ವ್ಯಕ್ತಿತ್ವ ಅಡಗಿರುತ್ತದೆ. ಅದು ಅವರಿಗೆ ಅರಿವಾಗಲು ತಕ್ಕ ಸಂದರ್ಭಗಳು ಒದಗಿಬರಬೇಕಷ್ಟೆ. ತನ್ನ ಪಾಲಿನ ಅದ್ಭುತ ದೀಪದ ನಿರೀಕ್ಷೆಯಲ್ಲಿರುವ ಸಾಮಾನ್ಯ ವ್ಯಕ್ತಿ ಪಾಚು ಅನಿರೀಕ್ಷಿತವಾಗಿ ಸಂದರ್ಭಗಳ ಸುಳಿಯಲ್ಲಿ ಸಿಕ್ಕಾಗ ತನ್ನೊಳಗಿನ ಅಸಾಮಾನ್ಯನನ್ನು ಹೇಗೆ ಹೊರತರುತ್ತಾನೆ ಎನ್ನುವುದೇ ಈ ಕಥೆಯ ತಿರುಳು.

ಒಬ್ಬ ಅವಿವಾಹಿತ ಯುವಕ, ಆತನ ಕುಟುಂಬಡೊಡನೆ ಅವನ ನಂಟು, ಮದುವೆಗೆ ಪಡುವ ಪರಿಪಾಟಲು ಇವೆಲ್ಲ ವಿಷಯಗಳನ್ನು ಒಂದಷ್ಟು ತಮಾಷೆ ಮತ್ತು ಲಘು ಹಾಸ್ಯದ ಧಾಟಿಯಲ್ಲೇ ತೋರಿಸುತ್ತಾ, ಸಿನಿಮಾ ನಿಧಾನಕ್ಕೆ ತೆರೆದುಕೊಳ್ಳುತ್ತಾ , ಪಾಚುವನ್ನು ಮತ್ತವನ ಪಾತ್ರವನ್ನು ಪರಿಚಯಿಸುತ್ತಾ ಹೋಗುತ್ತದೆ. ಶುರುವಿನಲ್ಲಿ ಸ್ವಲ್ಪ ನಿಧಾನಗತಿಯಂತೆ ಭಾಸವಾದರೂ ಎಲ್ಲೂ ಬೋರ್ ಹೊಡೆಸದೇ ನೋಡಿಸಿಕೊಂಡು ಹೋಗುತ್ತದೆ. ಇದೇನಿದು, ಕಥೆಯಲ್ಲಿ ಅಂಥದ್ದೇನೂ ವಿಶೇಷವಿಲ್ಲವಲ್ಲ ಅನ್ನಿಸುವ ಹೊತ್ತಲ್ಲೇ ಸಣ್ಣದೊಂದು ಆದರೆ ಮಹತ್ತರವಾದ ತಿರುವು ಪಾಚುವಿನ ಪಾತ್ರದ ಮತ್ತೊಂದು ಮಜಲನ್ನು ತೆರೆದಿಟ್ಟು ಸಿನಿಮಾ ಕುತೂಹಲಕಾರಿ ಆಯಾಮಕ್ಕೆ ಹೊರಳುತ್ತದೆ.

ಪಾಚುವಿನ ಪಾಲಿನ ಅದ್ಭುತ ಬೆಳಕಾಗಿ ಉಮ್ಮಾಚಿ ಬರುತ್ತಾರೆ. ಇಲ್ಲಿ ಪಾಚುವಿನ ಪಾತ್ರದಷ್ಟೇ ಮಹತ್ವದ ಪಾತ್ರ ಉಮ್ಮಾಚಿಯದ್ದು. ಇಲ್ಲಿ ಉಮ್ಮಾಚಿ ಕೇವಲ ಪಾತ್ರವಲ್ಲ ಒಂದು ಅನುಭೂತಿಯಂತೆ ವೀಕ್ಷಕರನ್ನು ಆವರಿಸುತ್ತಾರೆ. ನಗಿಸುತ್ತಾರೆ, ಕಚಗುಳಿ ಇಡುತ್ತಾರೆ, ಕಣ್ಣಂಚನ್ನು ತೇವವಾಗಿಸುತ್ತಾರೆ. ಮನಸ್ಸು ಭಾರವಾಗಿಸುತ್ತಾರೆ. ನಿಧಿ ಥರದ ಅಸಹಾಯಕ ಪ್ರತಿಭೆಗಳ ಪಾಲಿನ ಆಸರೆಯಾಗುತ್ತಾರೆ, ಭರವಸೆಯಾಗುತ್ತಾರೆ. ಚಿತ್ರ ಮುಗಿದ ಮೇಲೆ ಪಾಚು ಈ ಚಿತ್ರದ ಜೀವವಾದರೆ ಉಮ್ಮಾಚಿ ಈ ಚಿತ್ರದ ಭಾವ ಅನ್ನುವಷ್ಟು ಉಮ್ಮಾಚಿ ಮತ್ತವರ ಮಗನ ನಡುವಿನ ಆ ಒಂದು ಭಾವನಾತ್ಮಕ ದೃಶ್ಯ ಮನಸ್ಸಲ್ಲಿ ನಿಂತುಬಿಡುತ್ತೆ.

ಕೇಳಿದ್ದೆಲ್ಲ ಕೊಡುವ ಅದ್ಭುತ ಬೆಳಕು ಕೈಗೆ ಸಿಕ್ಕಾಗ ಅದರ ಲಾಭ ಪಡೆದುಕೊಳ್ಳುವವರೇ ಹೆಚ್ಚು. ಕೇಳಿದ್ದೆಲ್ಲ ಸಿಕ್ಕಿಬಿಡುವ ಸೌಭಾಗ್ಯ ಯಾರಿಗೆ ತಾನೇ ಬೇಡ ಹೇಳಿ? ಆದರೆ ಕೇಳಿದ್ದು ಸುಲಭವಾಗಿ ಸಿಕ್ಕುಬಿಟ್ಟಾಗ ಅದರ ಮಹತ್ವ ತಿಳಿಯೋದಾದರೂ ಹೇಗೆ ಅಲ್ಲವೇ. ಇಲ್ಲಿ ಪಾಚುವಿನ ಕೈಯ್ಯಲ್ಲಿ ದೀಪವೇನೋ ಇದೆ. ಆದರೆ ಅದು ಅವನಿಗೆ ಕೇವಲ ದೀಪವಷ್ಟೆ ಅಲ್ಲದೆ ಹೇಗೆ ಬದುಕಿನ ದಾರಿದೀಪವಾಗಿ ಬದಲಾಗುತ್ತೆ ಅನ್ನೋದನ್ನು ಚಿತ್ರ ನೋಡಿಯೇ ಆಸ್ವಾದಿಸಬೇಕು.

ಫಹಾದ್ ಎನ್ನುವ ನಟಭಯಂಕರ ಚಿತ್ರದಿಂದ ಚಿತ್ರಕ್ಕೆ ಪಾತ್ರಗಳ ಆಯ್ಕೆಯ ವಿಭಿನ್ನತೆಯಿಂದಲೇ ಮನಸ್ಸನ್ನು ಗೆದ್ದುಬಿಡುತ್ತಾನೆ. ಆತ ಎಲ್ಲಿಯೂ ನಟಿಸಿಯೇ ಇಲ್ಲ. ಆತನ ಅಭಿನಯದಲ್ಲಿ ಇವನಾ, ನಮ್ ಪಕ್ಕದ್ಮನೆ ಪಾಚು ಅನ್ನಿಸೋ ಅಷ್ಟು ಸಹಜತೆ. ಉಮ್ಮಾಚಿ ಪಾತ್ರಧಾರಿ ವಿಜಿ ವೆಂಕಟೇಶ್ ಅವರೂ ಅಷ್ಟೆ. ನಮ್ ಎದುರು ಮನೆ ಉಮ್ಮಾಚಿ ಅನ್ನಿಸೋ ಅಷ್ಟು ಆತ್ಮೀಯತೆ . ಪುಟ್ಟ ಹುಡುಗಿ ನಿಧಿ ಪಾತ್ರದಲ್ಲಿ ನಮ್ಮ ಕನ್ನಡದ ಹುಡುಗಿ ಧ್ವನಿ ರಾಜೇಶ್ ಮನಸ್ಸನ್ನು ಗೆಲ್ಲುತ್ತಾಳೆ. ರೈಲಿನಲ್ಲಿ ಜೊತೆಯಾಗುವ ಆ ಸಣ್ಣ ಹುಡುಗನ ಪಾತ್ರ ಸ್ವಲ್ಪ ಅನಗತ್ಯ ಎನಿಸಿದ್ದು ಹೌದು. ಕಥೆಗೆ ಏನೂ ಪೂರಕವಾದಂತೆ ಅನ್ನಿಸಲಿಲ್ಲ.

ಸಿನಿಮಾದ ಅವಧಿ ತುಸು ದೀರ್ಘವಾದಂತೆ ಅಲ್ಲಲ್ಲಿ ಭಾಸವಾದರೂ ಚಿತ್ರದುದ್ದಕ್ಕೂ ಇರುವ ನವಿರಾದ ನಿರೂಪಣೆ ವೀಕ್ಷಕರನ್ನು ಹಿಡಿದಿಡುತ್ತದೆ. ಚಿತ್ರದ ಸಂಭಾಷಣೆ ಕೂಡ ಬಹಳ ಚೊಕ್ಕವಾಗಿದ್ದು ವೀಕ್ಷಕರನ್ನು ನಗಿಸುತ್ತಲೇ ಕಣ್ಣಂಚನ್ನು ತೇವವಾಗಿಸುತ್ತದೆ. ಹಂಸಧ್ವನಿ, ನಿಧಿ ಸೇರಿದಂತೆ ಎಲ್ಲ ಪಾತ್ರಧಾರಿಗಳ ಸಹಜ ನಟನೆ, ಹದವಾದ ಹಿನ್ನೆಲೆ ಸಂಗೀತ, ಎಲ್ಲವೂ ಚಿತ್ರವನ್ನು ಮತ್ತಷ್ಟು ಮನಸ್ಸಿಗೆ ಹತ್ತಿರ ತರುತ್ತವೆ. ಪಾಚುವಿನ ಅದ್ಭುತ ದೀಪದ ಲೋಕದಲ್ಲಿ ಕನಸುಗಳು ಇವೆ, ಸ್ವಾರ್ಥ ಇದೆ. ಹಾಗೆಯೇ ಒಂದು ಸಂದೇಶವೂ ಇದೆ. ಅಷ್ಟೇ ಅಲ್ಲ, ಪ್ರೀತಿ ಪ್ರೇಮದ ಸಿಂಚನವೂ ಇದೆ. ಏಕೆಂದರೆ ಪ್ರೀತಿ ಇದ್ದಾಗ ತಾನೇ ಕನಸುಗಳಿಗೂ ರೆಕ್ಕೆ ಬರೋದು! ಒಟ್ಟಾರೆಯಾಗಿ ಒಂದು ಸಂಪೂರ್ಣ ಕೌಟುಂಬಿಕ ಪ್ಯಾಕೇಜ್ ಈ ಚಿತ್ರ.

ನಮ್ಮ ನಿಮ್ಮೊಳಗೂ ಒಂದು ಅದ್ಭುತ ದೀಪದ ಕಲ್ಪನೆ ಇರಬಹುದು. ಒಬ್ಬ ಪಾಚು ಇರಬಹುದು. ಅದ್ಭುತ ದೀಪದ ಕಲ್ಪನೆ ವಾಸ್ತವದಲ್ಲಿ ನಿಜವಾಗಿಬಿಟ್ಟರೆ ನಮ್ಮ ನಿಮ್ಮೊಳಗಿನ ಪಾಚು ಏನು ಮಾಡಬಹುದು ಎಂದು ಒಮ್ಮೆ ಸಣ್ಣಗೆ ಪ್ರಶ್ನೆ ಮಾಡಿಕೊಳ್ಳುವಂತೆ ಮಾಡುತ್ತದೆ ಈ ‘ಪಾಚುವುಮ್ ಅದ್ಭುತ ವಿಳಕ್ಕುಮ್’ ಎನ್ನುವ ಚಿತ್ರ. ಒಂದು ಸುಂದರ, ಕೌಟುಂಬಿಕ, ಸಹೃದಯ ಚಿತ್ರವನ್ನು ಕೊಟ್ಟ ನಿರ್ದೇಶಕರಾದ ಅಖಿಲ್ ಸತ್ಯನ್ ಮತ್ತು ತಂಡಕ್ಕೆ ಅಭಿನಂದನೆಗಳು. ಈ ಸಿನಿಮಾ ಅಮೇಜಾನ್‌ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

LEAVE A REPLY

Connect with

Please enter your comment!
Please enter your name here