ಧಿಲ್ಲೋನ್‌ ವೃತ್ತಿಜೀವನದ ಬಗ್ಗೆಯೂ ಮತ್ತಷ್ಟು ಆಸಕ್ತಿಕರ ವಿಷಯಗಳನ್ನು ವೀಕ್ಷಕರಿಗೆ ಪರಿಚಯ ಮಾಡುವ ಪ್ರಯತ್ನ ಮಾಡಬಹುದಿತ್ತು ಮತ್ತು ಅದಕ್ಕೆ ಅವಕಾಶವೂ ಇತ್ತು. ಇನ್ನೂ ಏನೋ ಇರಬೇಕಿತ್ತು ಎನಿಸುವ ಭಾವನೆ ಮೂಡಿಸಿ ಸಾಕ್ಷ್ಯಸರಣಿ ಮುಗಿದುಬಿಡುತ್ತದೆ. ಆದರೂ ಒಬ್ಬ ಯುವಸಂಗೀತಗಾರನೊಬ್ಬನ ಯಶೋಗಾಥೆಯನ್ನು ಸಂಕ್ಷಿಪ್ತವಾಗಿ ಹೇಳುವ ಈ ಸರಣಿ ಪ್ರಶಂಸಾರ್ಹವಾಗಿದೆ. ಏ ಪಿ ಧಿಲ್ಲೋನ್ ಫರ್ಸ್ಟ್ ಆಫ್ ಅ ಕೈಂಡ್ ಆಮೇಜಾನ್ ಪ್ರೈಮಲ್ಲಿ stream ಆಗುತ್ತಿದೆ.

‘ಏ ಪಿ ಧಿಲ್ಲೋನ್ ಫರ್ಸ್ಟ್ ಆಫ್ ಅ ಕೈಂಡ್’ ಇತ್ತೀಚಿಗೆ ಬಿಡುಗಡೆಯಾಗಿ ಸದ್ದು ಮಾಡುತ್ತಿರುವ ಸಾಕ್ಷ್ಯಚಿತ್ರ. ಯಾರು ಈ ಏ ಪಿ ಧಿಲ್ಲೋನ್ ಎಂದು ಅವರ ಹಿನ್ನೆಲೆ ನೋಡುತ್ತಾ ಹೋದರೆ ಬಹಳ ಕುತೂಹಲಕರ ಮತ್ತು ಆಸಕ್ತಿಕರ ವಿಷಯಗಳು ಅನಾವರಣವಾಗುತ್ತವೆ. ಅಮೃತಪಾಲ್ ಸಿಂಗ್ ಧಿಲ್ಲೋನ್ ಇವರ ಪೂರ್ಣಹೆಸರು. ಈತ ಪಂಜಾಬಿ ಮೂಲದ ಜನಪ್ರಿಯ Rap ಗಾಯಕ. ಭಾರತ ಮೂಲದವರಾದರೂ ಸದ್ಯಕ್ಕೆ ಕೆನಡಾ ದೇಶದ ನಾಗರಿಕರು ಮತ್ತು ತಮ್ಮ indo -canadian ಹಿನ್ನೆಲೆಯನ್ನು ಇಟ್ಟುಕೊಂಡೇ ಎರಡು ವಿಭಿನ್ನ ಸಂಸ್ಕೃತಿಗಳನ್ನು ತಮ್ಮದೇ ಶೈಲಿಯಲ್ಲಿ ತಮ್ಮ ಹಾಡುಗಳ ಮೂಲಕ ಪ್ರತಿನಿಧಿಸುತ್ತಿದ್ದಾರೆ.

1993ರಲ್ಲಿ ಜನಿಸಿದ ಗಾಯಕ ಪಂಜಾಬಿನ ಸಾಧಾರಣ ಕುಟುಂಬವೊಂದರ ಹಿನ್ನೆಲೆಯಲ್ಲೇ ಬೆಳೆದುಬಂದ ಹುಡುಗ. ಉನ್ನತ ವಿದ್ಯಾಭ್ಯಾಸಕ್ಕೆ ಕೆನಡಾ ದೇಶಕ್ಕೆ ವಲಸೆ ಹೋದ ಯುವಕನೊಬ್ಬ ಯುವ ಜನಾಂಗವನ್ನು ಹುಚ್ಚೆಬ್ಬಿಸುವಂಥ ಹಾಡುಗಳನ್ನು ಮಾಡುವ ಪಾಪ್ ಸಿಂಗರ್ ಆಗಿ ಬೆಳೆದ ದಾರಿ ವಿಸ್ಮಯ ಹುಟ್ಟಿಸುತ್ತದೆ. ಒಂದು ಸಾಕ್ಷ್ಯಚಿತ್ರ ತಯಾರು ಆಗುವ ಮಟ್ಟಿಗೆ ಸಾಧನೆ ಮಾಡಿದ್ದಾನಾ ಆ ಹುಡುಗ ಎಂದು ಅಚ್ಚರಿ ಮೂಡಿಸುತ್ತದೆ. ಅವನ ಯಶೋಗಾಥೆಯ ಒಂದು ಒಟ್ಟಾರೆ ಚಿತ್ರಣವನ್ನು ನಾಲ್ಕು ಸಂಚಿಕೆಗಳ ಈ ಸಾಕ್ಷ್ಯಚಿತ್ರ ಸರಣಿ ಬಿಡಿಸಿಡಲು ಪ್ರಯತ್ನಿಸಿದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ರಾತ್ರೊರಾತ್ರಿ ಬೆಳಕಿಗೆ ಬಂದು ಜನಪ್ರಿಯರಾದ ಅನೇಕ ಪ್ರತಿಭೆಗಳ ನಡುವೆ ಈ ಏ ಪಿ ಧಿಲ್ಲೋನ್ ಹೇಗೆ ಮತ್ತು ಏಕೆ ವಿಭಿನ್ನವಾಗಿ ನಿಲ್ಲುತ್ತಾನೆ ಎಂದು ಹೇಳುವ ಪ್ರಯತ್ನವನ್ನು ಈ ಸಾಕ್ಷ್ಯಚಿತ್ರ ಸರಣಿ ಮಾಡಿದೆಯಾದರೂ ಅಂದುಕೊಂಡಷ್ಟು ಆಳಕ್ಕೆ ಇಳಿಯದೇ ಬರೀ ಮೇಲ್ಪದರದ ನಿರೂಪಣೆಯಲ್ಲೇ ಮುಗಿದುಬಿಡುತ್ತದೆ.

Brown munde ಖ್ಯಾತಿಯ ಏ ಪಿ ಧಿಲ್ಲೋನ್ ಕುರಿತಾದ ಈ ಸಾಕ್ಷ್ಯಚಿತ್ರ ಸರಣಿಯಲ್ಲಿ ವಿಷಯಕ್ಕಿಂತ ಆಡಂಬರವೇ ಎದ್ದು ಕಾಣುತ್ತದೆ. ಬರಿಯ ಪ್ರಚಾರತಂತ್ರದಂತೆ ನಿರೂಪಿಸಲ್ಪಟ್ಟಿರುವ ಕಥಾನಕದಂತೆ ತೋರುತ್ತದೆ. ಇತ್ತೀಚೆಗೆ ಬಿಡುಗಡೆಯಾಗಿರುವ ಅನೇಕ ಸಂಗೀತ ಆಧಾರಿತ ಸಾಕ್ಷ್ಯಚಿತ್ರ ಸರಣಿಗಳಿಗೆ ಹೋಲಿಸಿದರೆ ಅವುಗಳಲ್ಲಿ ಜನರು ನಿರೀಕ್ಷೆ ಮಾಡುವಂತಹ ಸಂಗೀತಗಾರರ ಜೀವನದ ಒಳಪದರದ ಚಿತ್ರಣಗಳು ಈ ಸರಣಿಯಲ್ಲಿ ಕಾಣದೆ ಬರುವುದು ಬೇಸರದ ವಿಷಯ. ಯಾರ ಮೇಲೆ ಸಾಕ್ಷ್ಯಚಿತ್ರ ಮಾಡಲಾಗಿದೆಯೋ ಅವರ ವ್ಯಕ್ತಿತ್ವದೊಂದಿಗೆ ವೀಕ್ಷಕ ಕನೆಕ್ಟ್ ಆಗುವಂತಹ ಅವಕಾಶವನ್ನು ಇದರಲ್ಲಿ ಕಲ್ಪಿಸಿಯೇ ಇಲ್ಲ.

ಇದರಲ್ಲಿ ತಲಾ 30 ನಿಮಿಷಗಳ ನಾಲ್ಕು ಸಂಚಿಕೆಗಳು ಇವೆ. ಮೊದಲನೇ ಸಂಚಿಕೆಯಲ್ಲಿ ಧಿಲ್ಲೋನ್ ಹಿನ್ನೆಲೆಯ ಬಗ್ಗೆ ಪರಿಚಯವಿದೆ. ಪಂಜಾಬ್ ರಾಜ್ಯದ ಗುರುದಾಸ್ಪುರ ಎಂಬ ಊರಿನಿಂದ ಕೆನಡಾದವರೆಗಿನ ಆತನ ಪ್ರಯಾಣದ ಹಿನ್ನಲೆಯ ಬಗ್ಗೆ ಪರಿಚಯವಿದೆ. ಮಗ ಕೆನಡಾಕ್ಕೆ ಹೋಗಬೇಕೆಂಬುದು ಆತನ ತಂದೆಯ ನಿರ್ಧಾರ. ಆದರೆ ಧಿಲ್ಲೋನ್ ಆಸೆ ಅದಾಗಿರಲಿಲ್ಲ. ಇಂಗ್ಲೀಷ್‌ ಸರಿಯಾಗಿ ಬಾರದ, ಜೇಬಲ್ಲಿ ಹಣವಾಗಲಿ, ಕ್ರೆಡಿಟ್ ಕಾರ್ಡ್ ಆಗಲಿ ಇಲ್ಲದ ಸಾಧಾರಣ ಹಿನ್ನಲೆಯ ಹುಡುಗನೊಬ್ಬನ ವಿದೇಶಿ ಊರಿನ ಜೀವನದ ಜೊತೆಗಿನ ಸೆಣಸಾಟದ ಚಿತ್ರಣವಿದೆ. ತಂಗಲು ಸರಿಯಾಗಿ ಸ್ಥಳವಿಲ್ಲದೆ ವಿಕ್ಟೊರಿಯ ನಗರದಲ್ಲಿ ಫುಟ್‌ಪಾತಿನ ಮೇಲೆ ಮಲಗಿದ್ದ ಯುವಕನಿಗೆ ಸಹಾಯ ಹಸ್ತ ಚಾಚಿದ ಮೃದು ಮನಸ್ಸಿನ ಹೆಂಗಸಿನ ಸಹಾಯವನ್ನು ಧಿಲ್ಲೋನ್ ವಿನಮ್ರವಾಗಿ ನೆನೆಸಿಕೊಳ್ಳೋದನ್ನು ಮರೆಯುವುದಿಲ್ಲ.

ಇಡೀ ಸರಣಿಯಲ್ಲಿ ಎರಡು ವಿಭಿನ್ನ ಸಾಂಸ್ಕೃತಿಕ ಧ್ರುವಗಳನ್ನು ಅನುಭವಿಸಿದ ಯುವಕನ ಅನುಭವ ಚಿತ್ರಣ ಹೇಗೆ ಅವನ ಸಂಗೀತದಲ್ಲಿ ಪ್ರತಿಧ್ವನಿಸಿತು, ಒಬ್ಬ ವಲಸಿಗನಾಗಿ ಅವನ ಜೀವನದ ಅನುಭವಗಳು ಹೇಗೆ ಅವನ ಸಂಗೀತದ ಮೂಲಕ ಹೊರಹೊಮ್ಮಲ್ಪಟ್ಟಿತು ಎನ್ನುವುದನ್ನು ದಾಖಲಿಸಲು ಪ್ರಯತ್ನಿಸಿದ್ದಾರೆ. ಯಾರಿಗೂ ಪರಿಚಯವಿಲ್ಲದ ಒಬ್ಬ ಸಾಧಾರಣ ವಲಸಿಗ ಹೇಗೆ ರಾತ್ರೊರಾತ್ರಿ ತನ್ನ ‘brown munde’ ಆಲ್ಬಮ್ ಮೂಲಕ ಇಡಿಯ ಒಂದು ವಲಸಿಗ ಭಾರತೀಯ ಸಮುದಾಯವನ್ನು ಹುಚ್ಚೆಬ್ಬಿಸಿದ ಎನ್ನುವುದರ ನಿರೂಪಣೆಯಿದೆ. ಆತನ ಯಶೋಗಾಥೆ ಬರೀ ವಲಸಿಗರ ಸಮುದಾಯದಲ್ಲಿ ಅಷ್ಟೇ ಅಲ್ಲದೆ ಭಾರತದಲ್ಲೂ ಸಂಗೀತಪ್ರಿಯರಲ್ಲಿ ಸಂಚಲನ ಮೂಡಿಸಿದ್ದು ಸುಳ್ಳಲ್ಲ. ಅನೇಕ ಬಾಲಿವುಡ್ ತಾರೆಯರ ಸಮುದಾಯದಲ್ಲೂ ಧಿಲ್ಲೋನ್ ಸಂಗೀತ ಮನೆಮಾತಾಗಿದ್ದು ಹೌದು. ಹಸಿ ಎನಿಸುವಂತಹ ಮೊನಚು ಸಾಹಿತ್ಯ ಇರಬಹುದು, ನಿಂತಲ್ಲೇ ಹೆಜ್ಜೆ ಹಾಕಿಸುವಂತಹ ಸಂಗೀತ ಇರಬಹುದು ಒಟ್ಟಿನಲ್ಲಿ ಧಿಲ್ಲೋನ್ ಎಂದರೆ ಸದ್ಯಕ್ಕೆ ಯುವಜನತೆಯ ಫೆವರೇಟ್.

ಅಂತರ್ಜಾಲದ ಸೆನ್ಸೇಷನ್ ಆಗಿದ್ದ ಧಿಲ್ಲೋನ್ ಎಷ್ಟು ಜನಪ್ರಿಯ ಆದನೆಂದರೆ ಆತನ ಜನಪ್ರಿಯತೆಗೆ ಸಾಕ್ಷಿಯಾಗಿ 2021ರಲ್ಲಿ ಆದ ಗುರುಗ್ರಾಮ concert ಗ್ರೂಪ್ ಸೇರಿದ್ದ ಜನಸ್ತೋಮವೇ ಸಾಕ್ಷಿ. ಆಲಿಯಾ ಭಟ್, ರಣವೀರ್ ಸಿಂಗ್ ಆದಿಯಾಗಿ ಲಕ್ಷಾಂತರ ಮಂದಿ ಆ ಒಂದು concertಗಾಗಿ ಹುಚ್ಚೆದ್ದು ಕುಣಿದದ್ದು ಇತಿಹಾಸ. ಮೂರನೇ ಸಂಚಿಕೆಯಲ್ಲಿ ಇದರದ್ದೇ ಕುರಿತಾದ ನಿರೂಪಣೆ ಇದೆ. ಇದು ಆತನ ಮೊದಲನೇ ಲೈವ್ concert ಕೂಡ ಹೌದು. ಆದರೆ ಈ ಸಾಕ್ಷ್ಯಚಿತ್ರ ಸರಣಿಯಲ್ಲಿ ಬರೀ ಧಿಲ್ಲೋನ್ ಯಶೋಗಾಥೆ ಹೇಳುವುದಕ್ಕೆ ಮಹತ್ವ ಕೊಟ್ಟಿದ್ದಾರೆಯೇ ಹೊರತು ಈ ಇಡೀ ಪಯಣದಲ್ಲಿ ಧಿಲ್ಲೋನ್‌ನ ನಿಲುವು ಮತ್ತು ಧೋರಣೆ ಏನಿತ್ತು, ಆತನ ಭಾವಪಯಣ ಹೇಗಿತ್ತು ಎನ್ನುವುದರ ಚಿತ್ರಣ ವೀಕ್ಷಕನಿಗೆ ದೊರಕುವುದಿಲ್ಲ. ಆದರೆ ಧಿಲ್ಲೋನ್ ಸರಣಿಯುದ್ದಕ್ಕೂ ನೆನೆಸಿಕೊಂಡಿರುವ ಅವರ ಬಾಲ್ಯದ ಅನುಭವಗಳ ಚಿತ್ರಣ ಮತ್ತು ಜೀವನದ ಸಂಘರ್ಷಗಳ ಚಿತ್ರಣ ಮನಸ್ಸನ್ನು ತಟ್ಟುತ್ತದೆ.

ತನ್ನ ಅಜ್ಜಿಯು ಯಾರ ಸಹಾಯವೂ ಇಲ್ಲದೆ ತನ್ನನ್ನು ಹೇಗೆ ಬೆಳೆಸಿದಳು, ತಾನು ನಾಲ್ಕು ವರ್ಷಗಳ ನಂತರ ಭಾರತಕ್ಕೆ ಮರಳಿದಾಗ ಹೇಗೆ ತನ್ನನ್ನು ಬರಮಾಡಿಕೊಳ್ಳಲು ಬಂದಳು ಎಂಬುದನ್ನು ಧಿಲ್ಲೋನ್ ನೆನಪಿಸಿಕೊಳ್ಳುತ್ತಾರೆ. ಸರಣಿಯಲ್ಲಿ ಆಕೆ ಕೂಡ ಬಂದು ಹೋಗುತ್ತಾರೆ. ಗುರುಗ್ರಾಮ concert ಸಮಯದಲ್ಲಿ ಹೇಗೆ ಕೆಲವು ದುಷ್ಕರ್ಮಿಗಳು ಬೆದರಿಕೆ ಹಾಕಿ ಹಣ ಕೇಳಲು ಯತ್ನಿಸಿದರು ಎಂಬುದನ್ನೂ ಹಂಚಿಕೊಂಡಿದ್ದಾರೆ. ಇಂಥ ಕೆಲವು ಆಪ್ತ ಘಳಿಗೆಗಳು ಮತ್ತು ಯಾರಿಗೂ ತಿಳಿಯದ ಘಟನೆಗಳ ಪ್ರಸ್ತಾಪ ಈ ಸರಣಿಯಲ್ಲಿ ಇದೆ. ಇದೆಲ್ಲದರ ಜೊತೆಗೆ ಧಿಲ್ಲೋನ್ ಹೇಗೆ ಒಂದು ಬೇಸ್‌ಮೆಂಟ್‌ ಅಲ್ಲಿ ತಮ್ಮ ಸಂಗೀತ ಪಯಣವನ್ನು ಶುರು ಮಾಡಿ ಒಂದು ತಂಡವಾಗಿ ಬೆಳೆದರು ಎಂಬ ಪಯಣದ ನಿರೂಪಣೆ ಈ ಸರಣಿಯಲ್ಲಿ ಇದೆ. ಧಿಲ್ಲೋನ್ ಒಬ್ಬ ಮಾಸ್ಟರ್ ಸೌಂಡ್ ಮಿಕ್ಸರ್ ಕೂಡ ಹೌದು ಎಂಬ ಅಪರೂಪದ ವಿಚಾರ ಕೂಡ ಈ ಸರಣಿಯಿಂದ ತಿಳಿದುಬರುತ್ತದೆ.

ಇಷ್ಟೆಲ್ಲ ಇದ್ದಾಗಿಯೂ ಈ ಸರಣಿಯಲ್ಲಿ ಏನೋ ಕೊರತೆ ಇದೆ ಎಂದು ಅನಿಸುವುದಕ್ಕೆ ಕಾರಣ ಧಿಲ್ಲೋನ್‌ ಆಪ್ತವಲಯದವರ ಯಾವ ತುಣುಕೂ ಈ ಸರಣಿಯಲ್ಲಿಲ್ಲ. ಅವರ ವೃತ್ತಿಜೀವನದ ಕೆಲವು ಆಪ್ತರು ಮತ್ತು ಪ್ರಚಾರದ ವಲಯದವರ ಹೊರತಾಗಿ ಅವರ ವೈಯಕ್ತಿಕ ಜೀವನದ ಯಾವ ಆಪ್ತ ವ್ಯಕ್ತಿಗಳೂ ಅಥವಾ ಸ್ನೇಹಿತರ ಬಗೆಗಿನ ಮಾಹಿತಿ ಈ ಸಾಕ್ಷ್ಯಸರಣಿಯಲ್ಲಿ ಇಲ್ಲ. ಇನ್ನು ಮಿಕ್ಕಂತೆ ಅವರ ವೃತ್ತಿಜೀವನದ ಬಗ್ಗೆಯೂ ಮತ್ತಷ್ಟು ಆಸಕ್ತಿಕರ ವಿಷಯಗಳನ್ನು ವೀಕ್ಷಕರಿಗೆ ಪರಿಚಯ ಮಾಡುವ ಪ್ರಯತ್ನ ಮಾಡಬಹುದಿತ್ತು ಮತ್ತು ಅದಕ್ಕೆ ಅವಕಾಶವೂ ಇತ್ತು. ಇನ್ನೂ ಏನೋ ಇರಬೇಕಿತ್ತು ಎನಿಸುವ ಭಾವನೆ ಮೂಡಿಸಿ ಸಾಕ್ಷ್ಯಸರಣಿ ಮುಗಿದುಬಿಡುತ್ತದೆ. ಆದರೂ ಒಬ್ಬ ಯುವಸಂಗೀತಗಾರನೊಬ್ಬನ ಯಶೋಗಾಥೆಯನ್ನು ಸಂಕ್ಷಿಪ್ತವಾಗಿ ಹೇಳುವ ಈ ಸರಣಿ ಪ್ರಶಂಸಾರ್ಹವಾಗಿದೆ. ಏ ಪಿ ಧಿಲ್ಲೋನ್ ಫರ್ಸ್ಟ್ ಆಫ್ ಅ ಕೈಂಡ್ ಆಮೇಜಾನ್ ಪ್ರೈಮಲ್ಲಿ stream ಆಗುತ್ತಿದೆ.

LEAVE A REPLY

Connect with

Please enter your comment!
Please enter your name here