ನಯನ ನಾಗರಾಜ್‌ ರಂಗಭೂಮಿ ಪ್ರತಿಭೆ. ಆರಂಭದಲ್ಲಿ ರಂಗಗೀತೆಗಳನ್ನು ಹಾಡುತ್ತಿದ್ದರು. ಆಕಸ್ಮಾತ್‌ ಆಗಿ ರಂಗದ ಮೇಲೆ ಪಾತ್ರ ಮಾಡಿದ ಅವರ ನಟನೆಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಯ್ತು. ಮುಂದೆ ಆತ್ಮವಿಶ್ವಾಸದಿಂದ ನಟಿಸತೊಡಗಿದರು. ‘ಪಾ ಪ ಪಾಂಡು’ ಸೀರಿಯಲ್‌ನ ‘ಚಾರು’ ಮತ್ತು ‘ಗಿಣಿರಾಮ’ದ ‘ಮಹತಿ’ ಪಾತ್ರಗಳು ಅವರಿಗೆ ಹೆಸರು ತಂದುಕೊಟ್ಟವು. ಎರಡು ಭಿನ್ನ ಪಾತ್ರಗಳನ್ನು ನಿಭಾಯಿಸಿ ಸೈ ಎನಿಸಿಕೊಂಡರು. ನಯನ ಗಾಯನಕ್ಕೆ ಸೋಷಿಯಲ್‌ ಮೀಡಿಯಾದಲ್ಲಿ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಗಾಯಕಿ – ನಟಿ ನಯನ ಜೊತೆಗಿನ ಮಾತುಕತೆ ಇಲ್ಲಿದೆ.

ನೇರ ಮಾತು, ದಿಟ್ಟ ಹೆಜ್ಜೆ ಇಡುವ ‘ಮಾಸ್ತರ್ ಮಗಳು’ ಮಹತಿ ಅಂದ್ರೆ ಗಟ್ಟಿಗಿತ್ತಿ. ವಿದ್ಯೆ, ಬುದ್ಧಿಯಲ್ಲಂತೂ ಅವಳನ್ನು ಸದಾ ಎತ್ತರದಲ್ಲಿ ನಿಲ್ಲಿಸುವಷ್ಟು ಅಭಿಮಾನ. ಸರಳ ಉಡುಪು, ಗಂಭೀರ ವದನೆ ಮಹತಿ ಮಾದರಿ ಹೆಣ್ಣುಮಗಳು. ಆ ಮಟ್ಟಿಗೆ ಜನರ ಪ್ರೀತಿ ಗಳಿಸಿಕೊಂಡ ಪ್ರೇಕ್ಷಕರ ನೆಚ್ಚಿನ ಮಹತಿ ಅಲಿಯಾಸ್ ನಯನಾ ನಾಗರಾಜ್. ‘ಇವರು ಹೀರೋಯಿನ್‌ ಪಾತ್ರದಲ್ಲಾ?’ ಎಂದು ಮೂಗು ಮುರಿದವರೇ ‘ಗಿಣಿರಾಮ’ ಧಾರಾವಾಹಿ ನೋಡುತ್ತಾ ನೋಡುತ್ತಾ ಮಹತಿ ತಮ್ಮದೇ ಮನೆಯ ಮಗಳು, ಸೊಸೆ ಎನ್ನುವಷ್ಟು ಹಚ್ಚಿಕೊಂಡರು.

ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಉತ್ತರ ಕರ್ನಾಟಕ ಸೊಗಡಿನ ‘ಗಿಣಿರಾಮ’ ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಯನಾ ಅವರನ್ನು ಅಭಿಮಾನಿಗಳು ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಮತ್ತೊಮ್ಮೆ ಹೊಸ ಧಾರಾವಾಹಿ ಅಥವಾ ಸಿನಿಮಾ ಮೂಲಕ ಅವರನ್ನು ಕಣ್ತುಂಬಿಕೊಳ್ಳಲು ಜನ ಕಾಯುತ್ತಿದ್ದಾರೆ. ಆದರೆ ನಯನಾ ಮಾತ್ರ ಸದ್ಯ ನಟನೆಯಿಂದ ಬ್ರೇಕ್ ತೆಗೆದುಕೊಂಡಿದ್ದಾರೆ.

ಹೌದು, ‘ಗಿಣಿರಾಮ’ ಧಾರಾವಾಹಿ ಮುಗಿದು ಹಲವು ದಿನಗಳು ಕಳೆದರೂ ನಯನಾ ಬಣ್ಣ ಹಚ್ಚುವುದರತ್ತ ಮನಸ್ಸು ಮಾಡಿಲ್ಲ. ಅಂದರೆ ‘ಗಿಣಿರಾಮ’ ಧಾರಾವಾಹಿ ಮುಗಿದ ನಂತರ ನಯನಾ ಯಾವುದೇ ಹೊಸ ಧಾರಾವಾಹಿಯಲ್ಲಿ ಕಾಣಿಸಿಕೊಂಡಿಲ್ಲ. ಸಿನಿಮಾ ಕಡೆಗೂ ಹೋಗಿಲ್ಲ. ಹಾಗಾದರೆ ಅವರೇನು ಮಾಡುತ್ತಿದ್ದಾರೆ ಅಂದರೆ ತಮ್ಮ ವೈಯಕ್ತಿಕ ಬದುಕಿನ ಕಡೆಗೆ ವಿಶೇಷ ಗಮನಹರಿಸಿದ್ದಾರೆ. ಸದ್ಯಕ್ಕೆ ಪ್ರವಾಸದ ಮೂಡಿನಲ್ಲಿರುವ ಅವರು ಆಗಾಗ ಟೂರ್ ಅಂತ ಫ್ಯಾಮಿಲಿ, ಫ್ರೆಂಡ್ಸ್ ಜತೆ ಸುತ್ತಾಡುತ್ತಿದ್ದಾರೆ. ವೈಯಕ್ತಿಕ ಬದುಕನ್ನು ಎಂಜಾಯ್ ಮಾಡುತ್ತಿದ್ದಾರೆ. ‘ಒಂದಷ್ಟು ವರ್ಷಗಳ ನಂತರ ಸಣ್ಣದೊಂದು ಬ್ರೇಕ್ ಬೇಕು ಅನ್ನಿಸಿತು. ಹೀಗಾಗಿ ಸದ್ಯ ರಿಲ್ಯಾಕ್ಸೇಷನ್ ಮೂಡಿನಲ್ಲಿದ್ದೇನೆ’ ಎನ್ನುತ್ತಾರೆ.

ಕಿರುತೆರೆಯಿಂದ ಬೆಳ್ಳಿತೆರೆಯತ್ತ?
ಕಿರುತೆರೆಯಲ್ಲಿ ಶುರುವಾಗುವ ಹಲವರ ಬಣ್ಣದ ಬದುಕು ನೆಲೆ ನಿಲ್ಲುವುದೇ ಬೆಳ್ಳಿತೆರೆಯಲ್ಲಿ. ಅದೇ ರೀತಿ ನಯನಾ ಕೂಡ ‘ಗಿಣಿರಾಮ’ ನಂತರ ಹೊಸ ಸಿನಿಮಾ ಮೂಲಕ ಎದುರಾಗುತ್ತಾರೆ ಎಂದು ಪ್ರೇಕ್ಷಕರು ಕುತೂಹಲದಿಂದ ಕಾದಿದ್ದರು. ಆದರೆ ಪ್ರೇಕ್ಷಕರು ಇನ್ನಷ್ಟು ಸಮಯ ಕಾಯಲೇಬೇಕಂತೆ. ನಯನಾ ಮರೆತೇ ಹೋದರು ಅನ್ನುವಾಗ ರೀಎಂಟ್ರಿ ನೀಡುವ ಮೂಲಕ ಮತ್ತೊಮ್ಮೆ ವಿಭಿನ್ನ ಗೆಟಪ್‌ನಲ್ಲಿ ಮನರಂಜಿಸುವುದು ನಯನಾ ಕನಸು.
ಧಾರಾವಾಹಿಯಿಂದ ಬ್ರೇಕ್ ತೆಗೆದುಕೊಂಡು ಸಿನಿಮಾದತ್ತ ಪ್ರಯಾಣ ಬೆಳೆಸುವುದರತ್ತ ಗಮನ ನೀಡಲಿಲ್ಲ ಯಾಕೆ ಎಂದು ಕೇಳಿದರೆ ‘ಸಾಕಷ್ಟು ಕಥೆಗಳನ್ನು ಕೇಳಿದ್ದೆ. ಅವಕಾಶಗಳು ಬಂದಿದ್ದವು. ಆದರೆ ಪುಟ್ಟ ಪಾತ್ರವಾದರೂ ನನಗೆ ಅಭಿನಯಕ್ಕೆ ಪ್ರಾಧಾನ್ಯತೆ ಇರುವ ಪಾತ್ರ ಬೇಕು. ಅದು ಸಿಗುವ ತನಕ ಸಿನಿಮಾ ಬಗ್ಗೆ ಯೋಚನೆ ಇಲ್ಲ’ ಎನ್ನುತ್ತಾರೆ.

ಹಲವರು ಧಾರಾವಾಹಿಗಳಲ್ಲಿ ನಟಿಸುತ್ತಲೇ ಸಿನಿಮಾಗಳಲ್ಲೂ ತೊಡಗಿಕೊಳ್ಳುತ್ತಾರೆ ಅಥವಾ ಧಾರಾವಾಹಿಯೊಂದು ಮುಗಿಯುತ್ತಿದ್ದಂತೆ ಹಿರಿತೆರೆಯಲ್ಲಿ ದೊಡ್ಡ ಮಟ್ಟದಲ್ಲಿ ಲಾಂಚ್ ಆಗುತ್ತಾರೆ. ಆದರೆ ನಯನಾ ಅವರಿಗೆ ಈ ವಿಷಯದಲ್ಲಿ ಒಮ್ಮತವಿಲ್ಲ. ‘ಧಾರಾವಾಹಿಗಳ ಮೂಲಕ ನಿತ್ಯವೂ ನೋಡಿ ಬೇಸರವಾದ ಮುಖವನ್ನು ಮತ್ತೆ ಸಿನಿಮಾದಲ್ಲಿ ನೋಡಬೇಕಾ ಅಥವಾ ಈಗಾಗಲೇ ಪರಿಚಿತ ಮುಖವನ್ನು ಸಿನಿಮಾಕ್ಕೆ ಹಾಕಿಕೊಳ್ಳಬೇಕಾ ಎಂಬ ಭಾವ ಇಂಡಸ್ಟ್ರಿ ಮಟ್ಟದಲ್ಲೇ ಇದೆ. ಇದು ತಪ್ಪು ಅಂತಲೂ ಅಲ್ಲ. ಹೀಗಾಗಿ ಒಂದಷ್ಟು ಸಮಯದ ಗ್ಯಾಪ್ ನಂತರ ಮತ್ತಷ್ಟು ಹೊಸತನದೊಂದಿಗೆ ಪ್ರೇಕ್ಷಕರಿಗೆ ಎದುರಾಗಲು ಇಷ್ಟ’ ಎನ್ನುತ್ತಾರವರು.

ನಟನಾ ಜರ್ನಿ
‘ಪಾಪಪಾಂಡು’ ಧಾರಾವಾಹಿಯ ಚಾರು ಮೂಲಕ ನಗಿಸಿ ‘ಗಿಣಿರಾಮ’ದ ಮಹತಿ ಮೂಲಕ ಗಟ್ಟಿತನ ಪ್ರದರ್ಶಿಸಿದ ನಯನಾ ಈ ಪಾತ್ರಗಳ ಮೂಲಕವೇ ಹೆಚ್ಚು ಖ್ಯಾತಿ ಗಳಿಸಿದವರು. ಎರಡೂ ಸಹ ವಿಭಿನ್ನ ಗುಣವಿರುವ ಪಾತ್ರಗಳು. ಆದರೂ ಇಂತಹ ಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡವರು. ಚಾರು ಅಥವಾ ಮಹತಿ ಇಬ್ಬರಲ್ಲಿ ಯಾರಿಷ್ಟ ಅಂದರೆ ‘ಇಬ್ಬರೂ ನನ್ನೆರೆಡು ಕಣ್ಗಳು’ ಎನ್ನುತ್ತಾರೆ. ಆದರೆ ‘ಕಾಮಿಡಿ ಮಾಡಿ ನಗಿಸುವುದು ವಿಪರೀತ ಸವಾಲಿನದ್ದು’ ಎಂದು ಚಾರು ಪಾತ್ರದ ಬಗ್ಗೆ ಒಂದಿಷ್ಟು ಹೆಚ್ಚು ಪ್ರೀತಿ ತೋರಿಸುತ್ತಾರೆ.

‘ಶಾಂತಂ ಪಾಪಂ’ ಮೂಲಕ ಕ್ಯಾಮೆರಾ ಎದುರು ನಿಂತವರು ನಯನಾ. ಎಪಿಸೋಡ್‌ವೊಂದರಲ್ಲಿ ಕಾಣಿಸಿಕೊಂಡ ಇವರ ಸ್ಟೆಲಾ ಪಾತ್ರ ಭರ್ಜರಿ ಸದ್ದು ಮಾಡಿತ್ತು. ಇವರ ಮನದಲ್ಲಷ್ಟೇ ಅಲ್ಲ ಜನರ ಮನದಲ್ಲೂ ಅದು ಅಚ್ಚುಳಿಯದೆ ಉಳಿದಿದೆ. ‘ಮಂಗಳೂರ್ ಹುಡ್ಗಿ ಹುಬ್ಳಿ ಹುಡ್ಗ’ ಧಾರಾವಾಹಿಯ ಮೂಲಕ ಮೋಡಿ ಮಾಡಿರುವ ಇವರು ‘ಪಾತ್ರ ಚಿಕ್ಕದೋ, ದೊಡ್ಡದೋ ಎನ್ನುವುದಕ್ಕಿಂತ ನಟನೆಯ ಜರ್ನಿಯಲ್ಲಿ ಕಲಿತಿದ್ದು ಮಾತ್ರ ತುಂಬ ಇದೆ. ಇನ್ನಷ್ಟು ಕಲಿಯಬೇಕಿದೆ’ ಎನ್ನುತ್ತಾರೆ.

ಪಾಪ ಪಾಂಡು – ಚಾರು
‘ಪಾಪಪಾಂಡು’ ಧಾರಾವಾಹಿಗೆ ಆಯ್ಕೆ ಆಗಿದ್ದೇ ರೋಚಕ ಅನುಭವ ಎನ್ನುವ ಅವರು ‘ಚಾರು ಪಾತ್ರಕ್ಕೆ ಸೆಲೆಕ್ಟ್ ಆಗಿದ್ದೆ. ಆದರೆ ಚಾರುಗೆ ಇರಬೇಕಾದ ಉದ್ದ ಕೂದಲು ನನಗೆ ಇರಲಿಲ್ಲ. ಹೀಗಾಗಿ ನನ್ನ ಆಯ್ಕೆ ಅಡ್ಡ ಗೋಡೆಯ ಮೇಲಿನ ದೀಪದಂತೆ ಇತ್ತು. ಹಲವಾರು ಬಾರಿ ಒಂದೇ ಪಾತ್ರಕ್ಕೆ ಲುಕ್ ಪರೀಕ್ಷೆಗೆ ಒಳಗಾಗಿದ್ದೆ. ಆ ಧಾರಾವಾಹಿಯ ನಿರ್ದೇಶನದ ಹೊಣೆ ಹೊತ್ತಿದ್ದ ಸಿಹಿಕಹಿ ಚಂದ್ರು ನನ್ನ ಬಳಿಯೇ ಆ ಪಾತ್ರವನ್ನು ಮಾಡಿಸುವ ಪಣ ತೊಟ್ಟರು. ಚಿಕ್ಕ ಕೂದಲು ಹೊಂದಿದ್ದ ನಾನು ಚಾರು ಪಾತ್ರಕ್ಕಾಗಿ ವಿಗ್ ಹಾಕಿಕೊಂಡು ನಟಿಸಿದ್ದೆ. ಆದರೆ ಒಂದೇ ಟೇಕ್ ಎನ್ನುವುದು ಆ ಧಾರಾವಾಹಿಯ ಮಂತ್ರವಾಗಿತ್ತು. ಮೊದಮೊದಲು ಹಲವು ಟೇಕ್‌ಗಳನ್ನು ತೆಗೆದುಕೊಳ್ಳುತ್ತಿದ್ದೆ. ಆಂಗಿಕ ಚಲನೆಯೇ ಆ ಪಾತ್ರಕ್ಕೆ ಅತೀ ಮುಖ್ಯವಾಗಿತ್ತು. ಅದರ ಜತೆಗೆ ಡೈಲಾಗ್ ಒಪ್ಪಿಸುವುದು ಸವಾಲಾಗಿತ್ತು. ಇಲ್ಲಿ ಕಲಿತಿದ್ದೇ ‘ಗಿಣಿರಾಮ’ದಲ್ಲಿ ಲೀಲಾಜಾಲವಾಗಿ ಅಭಿನಯಿಸಲು ಸಹಾಯವಾಯ್ತು. ಆದರೆ ‘ಗಿಣಿರಾಮ’ ಕೂಡ ಕೆಲಸದ ಮೇಲಿನ ಶ್ರದ್ಧೆ, ಕೌಶಲಗಳನ್ನು ಅಳವಡಿಸಿಕೊಳ್ಳುವುದನ್ನು ಹೇಳಿಕೊಟ್ಟಿದೆ’ ಎನ್ನುತ್ತಾರೆ.

ಬಿಗ್‌ಬಾಸ್ ಎನ್ನುವ ಬದುಕಿನ ರಿಯಾಲಿಟಿ
‘ಗಿಣಿರಾಮ’ ಧಾರಾವಾಹಿ ಮೂಲಕ ಖ್ಯಾತಿ ಪಡೆದಿದ್ದ ಮಹತಿ ಕೆಲ ದಿನಗಳ ಮಟ್ಟಿಗೆ ‘ಬಿಗ್‌ಬಾಸ್’ ಮನೆಗೆ ಹೋಗಿದ್ದರು. ಆ ಮನೆಯ ಅನುಭವ ಹೇಗಿತ್ತು? ‘ನಾನು ನೇರವಾಗಿ ಮಾತನಾಡುವವಳು. ಯಾವುದು ಇಷ್ಟವಾಗಲ್ಲ ಅಂದರೆ ಅದನ್ನು ನೇರವಾಗಿ ಹೇಳುತ್ತೇನೆ. ನನ್ನ ನೇರವಂತಿಕೆ ಬೇರೆಯವರಿಗೂ ಇಷ್ಟವಾಗುತ್ತಿರಲಿಲ್ಲ. ಆ ಸಮಯದಲ್ಲಿ ಸಾಕಷ್ಟು ನೆಗೆಟಿವ್ ಕಮೆಂಟ್‌ಗಳನ್ನು ಎದುರಿಸಿದೆ. ಆದರೆ ಯಾರನ್ನೋ ಮೆಚ್ಚಿಸಲು ನಾನು ನಾಟಕವಾಡುವ ಅಗತ್ಯವಿರಲಿಲ್ಲ. ಬಿಗ್‌ಬಾಸ್ ಅನ್ನು ಹೊರಗಡೆಯಿಂದ ನೋಡಿದಾಗ ಅಡುಗೆ ಮನೆಯಲ್ಲೇ ಯಾಕೆ ಜಗಳ ಅನ್ನಿಸುತ್ತಿತ್ತು. ಆದರೆ ಅಲ್ಲಿ ಹೋದಾಗ ಅನುಭವ ಆಯ್ತು. ಕೆಲಸ ಹಂಚಿಕೆ, ಅಡುಗೆ, ಸ್ವಚ್ಛತೆ ಇವೆಲ್ಲವೂ ಜಗಳದ ಮೂಲ. ನನಗೆ ಕೂಡ ಕೆಲವರ ಅಶಿಸ್ತು ವಿಪರೀತ ಕೋಪ ಬರಿಸುತ್ತಿತ್ತು. ಈ ಶೋ ನನಗಲ್ಲ ಎಂದು ಅನಿಸಿದ್ದೂ ಇದೆ’ ಎನ್ನುತ್ತಾರೆ.

ಸಂಗೀತದಿಂದ ನಟನೆಯವರೆಗೆ
ನಯನಾ ರಂಗಭೂಮಿ ನಂಟುಳ್ಳವರು. ಸಂಗೀತವನ್ನೇ ಸದಾ ಉಸಿರಾಡುವವರು. ನಯನಾ ಅವರಿಗೆ ಬಾಲ್ಯದಿಂದಲೂ ಸಂಗೀತ ಅಂದರೆ ಜೀವ. ಶಾಲೆಯ ದಿನಗಳಿಂದಲೂ ಹಾಡುತ್ತಲೇ ಬೆಳೆದವರು. ಕ್ರೀಡೆ, ನೃತ್ಯ ಹೀಗೆ ಪಠ್ಯೇತರ ಚಟುವಟಿಕೆಗಳಲ್ಲಿ ಸದಾ ಮುಂದಿದ್ದವರು. ಆದರೆ ಓದು ಅಂದರೆ ಅಷ್ಟಕಷ್ಟೆ ಎನ್ನುವ ಅವರು ಬಾಲ್ಯದಲ್ಲಿ ತಮ್ಮ ಜಗತ್ತು ತುಂಬ ಚಿಕ್ಕದು ಎನ್ನುತ್ತಾರೆ. ಪಿಯುಸಿಯವರೆಗೂ ಅವರು ಹೆಚ್ಚು ಸ್ನೇಹಿತರೊಂದಿಗೆ ಬೆರೆತವರಲ್ಲ. ಹೋಟೆಲ್, ಶಾಪಿಂಗ್ ಅಂತೆಲ್ಲ ಓಡಾಡಿದವರೂ ಅಲ್ಲ. ನಂತರ ಅವರ ಸಂಗೀತ ಯಾನ ಅವರದ್ದೇ ಆದ ಮ್ಯೂಸಿಕ್ ಬ್ಯಾಂಡ್ ಹುಟ್ಟು ಹಾಕುವಂತೆ ಮಾಡಿತು. ಬೆಂಗಳೂರು, ತಮಿಳುನಾಡು ಸೇರಿದಂತೆ ಹಲವೆಡೆ ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಂಡವರ ಚಿತ್ತ ಹರಿದಿದ್ದು ನಾಟಕಗಳತ್ತ.

ರಂಗಕರ್ಮಿ ದಾಕ್ಷಾಯಣಿ ಭಟ್ ಅವರ ತಂಡದೊಂದಿಗೆ ರಂಗ ಚಟುವಟಿಕೆಯಲ್ಲಿ ತೊಡಗಿಕೊಂಡರು. ಅಲ್ಲೂ ಕೂಡ ಸಂಗೀತದ ಭಾಗವನ್ನೇ ಆಯ್ಕೆ ಮಾಡಿಕೊಂಡರು. ನಂತರ ಶುರುವಾಗಿದ್ದು ಅವರ ಕಿರುತೆರೆ ಜರ್ನಿ. ಆದರೆ ತೆರೆಯ ಮೇಲೆ ಕಾಣಿಸಿಕೊಳ್ಳುವುದು ಅವರಿಗೆ ಸುಲಭವಾಗಿರಲಿಲ್ಲ. ಹಲವಾರು ಊರುಗಳಿಗೆಲ್ಲ ತೆರಳಿ ಆಡಿಷನ್ ನೀಡುತ್ತಿದ್ದರು. ಆದರೆ ಸುಂದರವಾಗಿಲ್ಲದ ಅವರ ಹಲ್ಲುಗಳೇ ಅವರ ಅವಕಾಶಗಳನ್ನು ಕಿತ್ತುಕೊಳ್ಳುತ್ತಿದ್ದವು. ಹಲವಾರು ಧಾರಾವಾಹಿಗಳಲ್ಲಿ ಹಲ್ಲಿನ ಕಾರಣಕ್ಕೆ ರಿಜೆಕ್ಟ್ ಆಗುತ್ತಿದ್ದರಂತೆ. ಹಿಂಜರಿಕೆ ಸ್ವಭಾವ ಅವರನ್ನು ಆಗಾಗ ಕುಗ್ಗಿಸುತ್ತದೆಯಂತೆ. ‘ಪಾಪಪಾಂಡು’ವಿನಲ್ಲಿ ಕಾಮಿಡಿಯಲ್ಲಿ ಸೈ ಎನಿಸಿಕೊಂಡವರು ‘ಗಿಣಿರಾಮ’ದ ಮಹತಿಯಂಥ ಗಂಭೀರ ಪಾತ್ರ ಅವರಿಗೆ ಸುಲಭವಾಗಿರಲಿಲ್ಲ. ಆದರೆ ಅದನ್ನು ಸಾಧ್ಯವಾಗಿಸಿಕೊಂಡರು. ಹೀಗೆ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿ ಸದ್ಯ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಗಾಯನಕ್ಕೆ ಮಾತ್ರ ಬ್ರೇಕ್ ನೀಡಿಲ್ಲ. ‘ಎಸ್ ಬಿ ಬಾಲಸುಬ್ರಹ್ಮಣ್ಯ ಅವರ ಜತೆ ಹಾಡಿದ್ದು ಅದೃಷ್ಟ’ ಎನ್ನುವ ಅವರಿಗೆ ಗಾಯಕ ಸೋನು ನಿಗಮ್ ಅವರನ್ನು ಭೇಟಿಯಾಗುವ ಕನಸಿದೆ.

ಇಟಾಲಿಯನ್ ಫುಡ್ ಇಷ್ಟ
ನಯನಾ ಅವರಿಗೆ ಸಾಕಷ್ಟು ಹವ್ಯಾಸಗಳಿವೆ. ಅವುಗಳಲ್ಲಿ ಅಡುಗೆ ಮಾಡುವುದು ಕೂಡ ಮುಖ್ಯವಾದದ್ದು. ವೆರೈಟಿ ಅಡುಗೆ ಮಾಡುವುದರಲ್ಲಿ ಇವರು ಸಿದ್ಧಹಸ್ತರು. ಅದರಲ್ಲೂ ಇಟಾಲಿಯನ್ ಸ್ಟೈಲ್‌ ಇವರ ಫೇವರಿಟ್.

LEAVE A REPLY

Connect with

Please enter your comment!
Please enter your name here