Disney Hotstarನಲ್ಲಿ ಸ್ಟ್ರೀಂ ಅಗುತ್ತಿರುವ ‘ಹ್ಯೂಮನ್’ ವೆಬ್ ಸರಣಿ ಅಂಕೆಯಿಲ್ಲದ ಕಾರ್ಪೊರೇಟ್ ವೈದ್ಯಕೀಯ ಕ್ಷೇತ್ರದ ಕರಾಳ ಮುಖದ ಅನಾವರಣ, ಜನಸಾಮಾನ್ಯರ ಕರುಣಾಜನಕ ಕಥನ.

ಅತಿ ಪವಿತ್ರ ವೈದ್ಯಕೀಯ ವೃತ್ತಿಯ ಹಿಂದೆ ಅತಿ ಕರಾಳ ವಾಸ್ತವ ಅಡಗಿದೆ. ಮಾರಾಟ ವೃತ್ತಿಯಲ್ಲಿ ಇರುವವರಿಗೆ ತಲುಪಲೇಬೇಕಾದ ಟಾರ್ಗೆಟ್‌ಗಳಿರುತ್ತವೆ. ಗುರಿ ಮುಟ್ಟದಿದ್ದರೆ ಬೋನಸ್ಸುಗಳಿಲ್ಲ. ವೈದ್ಯರಿಗೆ ಹಾಗಲ್ಲ, ಅಂಥ ಸುಸ್ಪಷ್ಟ ಟಾರ್ಗೆಟ್ಟುಗಳಿಲ್ಲ. ಅವರ ಪಾಲಿನದ್ದು ಹಸುವಿನ ವೇಷದ ಹೆಬ್ಬುಲಿ. ನಿತ್ಯ ಅಹಾರ ಕೊಡದಿದ್ದರೆ ಅವರೇ ಸ್ವಾಹಾ. ನುಂಗಿಬಿಡುವ ಹೆಬ್ಬುಲಿಯ ಬೋನಿನೊಳಗೇ ಇರುವವು ಔಷಧ ಕಂಪನಿಗಳು. ಹೊತ್ತು ಹೊತ್ತಿಗೂ ತುತ್ತು ಕೊಡದಿದ್ದರೆ ಆಹಾರ ಸರಣಿಗೆ ಮೊದಲು ಬಲಿಯಾಗಬೇಕಾದ ಅನಿವಾರ್ಯ ಅಂಥ ಕಂಪನಿಗಳದ್ದು. ಹಾಗಾಗಿ ರಕ್ತ ಮಾಂಸದ ಯಾವುದೇ ಪ್ರಾಣಿಯನ್ನೂ ಆಹಾರವಾಗಿಸಲು ನೀತಿ ನೇಮ ಪಕ್ಕಕ್ಕಿಡಲೇಬೇಕು, ಆ ಪ್ರಾಣಿ‌ ಮನುಷ್ಯನೇ ಆಗಿದ್ದರೂ ಸರಿ. ಲ್ಯಾಬ್ ಟೆಸ್ಟುಗಳು, ಹೊಸ ಔಷಧ ಆವಿಷ್ಕಾರಗಳೆಲ್ಲ ಕೊರೋನಾ ಕಾರಣದಿಂದ ಜನಸಾಮಾನ್ಯರಿಗೆ ಪರಿಚಯವಾಗಿದೆ. ಇದೇ ಸಂದರ್ಭದಲ್ಲಿ ಬಂದಿರುವ ವೆಬ್ ಸರಣಿ ‘ಹ್ಯೂಮನ್’ ವರ್ತಮಾನಕ್ಕೆ‌ ಅತಿಹೆಚ್ಚು ಪ್ರಸ್ತುತ.

ಇದೊಂದು ಕಾಲ್ಪನಿಕ ಕತೆಯೆಂಬುದು ನಿಜ. ಆದರೆ ಇಂಥ ಅನಾಹುತ ನಮ್ಮಲ್ಲಿ ನಡೆಯಬಹುದಾದ ಅಪಾಯವಂತೂ ಇದ್ದೇ ಇದೆ. ಅದಕ್ಕಿಂತಲೂ ಮುಖ್ಯವಾಗಿ ಅಂಥ ದುರಂತ ಈಗಾಗಲೇ ಹಲವು ಸಲ ನಡೆದಿರುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ. ಸರ್ಕಾರವನ್ನೂ ತಮ್ಮ ಬಿಗಿಮುಷ್ಠಿಯಲ್ಲಿ ಹಿಡಿದಿಡುವಷ್ಟು ಪ್ರಭಾವಿ ಕಾರ್ಪೊರೇಟ್ ಆಸ್ಪತ್ರೆಗಳು ಹೊಸದೇನಲ್ಲ. ಆದರೆ ಸರ್ಕಾರಗಳ‌ ಮೇಲಿನ ಅವುಗಳ ಹಿಡಿತಕ್ಕಿಂತ ಹೆಚ್ಚು ಅಪಾಯಕಾರಿ ವೈದ್ಯರ ಮೇಲಿನ ಅವರ ಹಿಡಿತ. ತನಗೇ ಗೊತ್ತಾಗದಂತೆ ಆ ಹಿಡಿತದಲ್ಲಿ ಬಂಧಿ ಮಾಡುವ ವ್ಯವಸ್ಥೆಯದು ಎಂಬ ಅಂಶ ಡಾ.ಸೈರಾ ಸಭರ್ವಾಲ್ ಪಾತ್ರದ ಮೂಲಕ ವ್ಯಕ್ತವಾಗುವ ರೀತಿ ಇಲ್ಲಿ ಮನಮುಟ್ಟುವಂಥದ್ದು. ಸರ್ವೇಸಾಮಾನ್ಯ ಮಧ್ಯಮ ವರ್ಗದ ಕೌಟುಂಬಿಕ ಹಿನ್ನೆಲೆಯಿರುವ ಅವಳ ವೈದ್ಯಕೀಯ ಆದರ್ಶಗಳು ದೊಡ್ಡ ಮಟ್ಟದ್ದೇ. ಆದರೆ ವೃತ್ತಿಯಲ್ಲಿ ಏಳಿಗೆಯ ಅನಿವಾರ್ಯತೆ ಆದರ್ಶಗಳನ್ನು ಕ್ರಮೇಣ ತಿಳಿಗೊಳಿಸುವಷ್ಟು ಬಲಿಷ್ಠವಾದದ್ದು. ಅದನ್ನು‌ ಮೆಟ್ಟಿ ನಿಲ್ಲುವುದು ಸುಲಭಸಾಧ್ಯವಲ್ಲ. ಡಾ. ಸೈರಾಗೂ ಅದು ಸುಲಭವಾಗುವುದಿಲ್ಲ.

ಇನ್ನೊಂದೆಡೆ ಔಷಧೋತ್ಮಾದನಾ ಕಂಪನಿಗಳು. ಕೊರೋನಾದ ವಿಕ್ಷಿಪ್ತ ಪರಿಸ್ಥಿತಿಯಲ್ಲಿ ಲಸಿಕೆ ಕಂಡುಹಿಡಿದ ಭಾರತೀಯ ಕಂಪನಿಗಳು ದೇಶವ್ಯಾಪಿ ಹೊಗಳಿಕೆಗೆ ಪಾತ್ರವಾದವು. ಆದರೆ ಸಂಶೋಧನೆಗೆ ಅಪರಿಮಿತ ಹಣ ಸುರಿದು ಕೊನೆಗೂ ಯಶ ಕಾಣದ ಕಂಪನಿಗಳು ಸಾರ್ವಜನಿಕರ ಗಮನಕ್ಕೆ ಬರುವುದೇ ಇಲ್ಲ. ಬ್ಯಾಲೆನ್ಸ್ ಶೀಟನ್ನು ಬ್ಯಾಲೆನ್ಸ್ ಮಾಡಲು ಅವು ಹೊಸ ಔಷಧಿ ಕಂಡುಹಿಡಿಯಲೇ ಬೇಕು. ಇಲ್ಲದಿದ್ದರೆ ದಿವಾಳಿಯಾಗುವ ಒತ್ತಡ. ನೈತಿಕತೆಯ ಬಗ್ಗೆ ಯೋಚಿಸಲು ಪುರುಸೊತ್ತೇ ಇಲ್ಲದ ಸ್ಥಿತಿ. ಇಲ್ಲಿನ ವಾಯು ಫಾರ್ಮಾ ಅಂಥದ್ದೊಂದು ಕಂಪನಿ.

ನೀತಿ ನೇಮ ಮರೆತ ಆಸ್ಪತ್ರೆಗಳಿಗೆ, ನೈತಿಕತೆಯ ಬಗ್ಗೆ ಯೋಚಿಸಲು ಆಸ್ಪದವಿಲ್ಲದ ಕಂಪನಿಗಳಿಗೆ ಗಾಳದ ಹುಳುವಾಗುವುದು ಬಡತನ ರೇಖೆಯ ಕೆಳಗಿನ ಮಂದಿ. ವೈದ್ಯಕೀಯ ಪರೀಕ್ಷೆಗೆ ಒಗ್ಗಿಕೊಳ್ಳುವ ಅವರಿಗೆ ಮುಂದಿರುವ ಬದುಕಿಗಿಂತಲೂ ಆ ಕ್ಷಣಕ್ಕೆ ಕೈಗೆ ಸಿಗುವ ಹಣ ದೊಡ್ಡದು. ಮಲೆನಾಡಿನ ಮಳೆಗಾಲದಲ್ಲಿ ಅಣಬೆಗಳು ತಾನಾಗಿ ಹುಟ್ಟುತ್ತವೆ. ಹಾಗೆಯೇ ಬೇಡಿಕೆ ಮತ್ತು ಅನಿವಾರ್ಯತೆ ಇರುವ ಕಡೆ ಹುಟ್ಟಿಕೊಳ್ಳುವುದು ದಲ್ಲಾಳಿಗಳು. ಬೇಡಿಕೆ-ಪೂರೈಕೆಯ ಮರ್ಮದ ಆಳದ ಅರಿವಿರುವ ದಲ್ಲಾಳಿಗಳಿಗೆ ಸುಲಿಗೆಯ ದಾರಿ ಯಾರೂ ತೋರಿಸಿಕೊಡಬೇಕಿಲ್ಲ. ಹೃದಯವಿಲ್ಲದ ಅಂಥ ದಲ್ಲಾಳಿಯನ್ನಿಲ್ಲಿ ಕಂಡಾಗ ಹೃದಯ ಚುರ್ ಎನ್ನುತ್ತದೆ. ಹಾಗಿರುವ ದಲ್ಲಾಳಿಯ ಕೈಯಲ್ಲಿ ತನ್ನ ಕುಟುಂಬವನ್ನೇ ಪಣಕ್ಕಿಡುವ ಸ್ಲಂ ಹುಡುಗ ಮಂಗು ಆಗಸಕ್ಕೆ ಏಣಿ ಹಾಕಿ ಮಂಗನಾಗುವುದು ಅವನ ದೋಷವಲ್ಲ. ಪರಿಸ್ಥಿತಿಯ ದುರಂತ. ತನ್ನ ತಾಯಿಯನ್ನು ಔಷಧ ಪ್ರಯೋಗಕ್ಕೊಡ್ಡಿ ಬದುಕು ದಾರುಣವಾದಾಗ ಆತ ದಾರಿ ಕಾಣದವ. ಕೊನೆಗೆ ಚಿಕಿತ್ಸೆಗೆ ದುಡ್ಡು ಹೊಂದಿಸಲು ಜೂಜು ಕೇಂದ್ರದಲ್ಲಿ ಜೀತಕ್ಕೆ ದುಡಿಯಬೇಕು. ದೊಡ್ಡ ಕಂಪನಿಗಳ ಜೂಜಿಗೆ ಅಗ್ಗದ ಜೀವಗಳು ಬಲಿಯಾಗುವ ಪರಿಯನ್ನು‌ ಬಿಂಬಿಸಿದ ರೀತಿ ಅರ್ಥಪೂರ್ಣ.

ಕಾರ್ಪೊರೇಟ್ ಆಸ್ಪತ್ರೆಗಳು ರೋಗಿಗಳನ್ನಷ್ಟೇ ಶೋಷಿಸುತ್ತವೆ ಎಂಬುದು ತಪ್ಪು ಕಲ್ಪನೆ. ಅವುಗಳ ಶೋಷಣೆಗೆ ಮೊದಲ ಹಂತದಲ್ಲೇ ಒಳಗಾಗುವವರು ವೈದ್ಯರು. ಬೃಹತ್ ಆಸ್ಪತ್ರೆಗಳ ಆಡಳಿತ ವಿಭಾಗಕ್ಕೆ ವೈದ್ಯರನ್ನು ನಿಯಂತ್ರಿಸುವ ನಾಜೂಕು‌ ಕರಗತ. ಸ್ವತಂತ್ರ ಆಲೋಚನೆಯ ವೈದ್ಯರ ವಿಭಾಗಕ್ಕೆ ಹಣಕಾಸು ಕಡಿತ‌ ಮಾಡುವುದು, ಮತ್ತೂ ಕೇಳದಿದ್ದಾಗ ಹೊರದಬ್ಬುವ ತಂತ್ರಗಳಿಗೆ ಬಲಿಯಾಗುವವ ಡಾ. ಶಿಂಧೆ. ರಂಗಭೂಮಿಯ ಭದ್ರ ಬುನಾದಿಯಿರುವ ಅತುಲ್ ಕುಮಾರ್ ಇಲ್ಲಿ ಶಿಂಧೆ ಪಾತ್ರದಲ್ಲಿ ಅಚ್ಚುಕಟ್ಟು. ಸಂಭಾಷಿಸುವ ಧಾಟಿ,‌ ಮುಖದಲ್ಲಿನ ಭಾವನೆ ಎಲ್ಲೆಲ್ಲಿ ಹೇಗಿರಬೇಕೋ ಹಾಗಿದೆ. ಆ ಕಾರಣದಿಂದ ಅದೊಂದು ಪಾತ್ರ ಕಡಿಮೆ ಅವಧಿಗೆ ತೆರೆಯ ಮೇಲೆ ಬಂದರೂ‌ ನೆನಪಲ್ಲಿ ಉಳಿಯುತ್ತದೆ.

ಈ ಸರಣಿ ಹೇಳುವ ವಿಚಾರದ ಗಂಭೀರತೆಯೇ ಮೊದಲ ನಾಲ್ಕು ಎಪಿಸೋಡುಗಳನ್ನು ಲೀಲಾಜಾಲವಾಗಿ ನೋಡಿಸಿಕೊಂಡು ಸಾಗುತ್ತದೆ. ಆದರೆ ಐದರಿಂದ ಎಂಟರವರೆಗೆ ಮುಖ್ಯ ಪಾತ್ರಗಳ ಹಿನ್ನೆಲೆ ಕತೆಯ ಕಡೆ ಗಮನ ಕೊಡಲಾಗಿದೆ. ಅವರು ಬಾಲ್ಯದಲ್ಲಿ ಬೆಳೆದುಬಂದ ಬಗೆ ಮೂಲ‌ ಕತೆಗೆ ಹೆಚ್ಚಿನ ಸಾಮಗ್ರಿ ಒದಗಿಸುವುದಿಲ್ಲ. ಈಗ ಅವರೆಲ್ಲ ಹಾಗೇಕಿದ್ದಾರೆ ಎಂಬುದಕ್ಕೆ ಕಾರಣ ತಿಳಿಸುವ ಅಗತ್ಯ ಇರಲಿಲ್ಲ. ಆ ನಾಲ್ಕೂ ಅಧ್ಯಾಯಗಳನ್ನು ಎರಡಕ್ಕೇ ಸೀಮಿತಗೊಳಿಸಿದ್ದರೆ ಸಾಕಿತ್ತು.

ಉಳಿದಂತೆ ಅತಿ ಸಿರಿವಂತರ ಜೀವನ ಶೈಲಿ ಮತ್ತು ಮತ್ತು ಕಡುಬಡವರ ಆದ್ಯತೆಗಳ ಚಿತ್ರಣ ಉತ್ತಮ ಪ್ರಸ್ತುತಿ. ಮೇಲ್ವರ್ಗದ ಪಾತ್ರಗಳಿಗೆ ಶೀತಲ ಭಾವಗಳು, ತೂಕದ ಮಾತುಗಳು‌. ಕೆಳವರ್ಗದಲ್ಲಿ ಮಾತು ಅನಿಯಂತ್ರಿತ, ಭಾವ ಅತಿರಂಚಿತ. ಸಂತಸ ನೀಡುವ ಔಷಧ ಪ್ರಯೋಗಕ್ಕೆ ಒಳಗಾದ ಹತ್ತು ಹುಡುಗಿಯರಿಗೆ ನಗು ಅನಿಯಂತ್ರಿತ. ತನಗೆ ಬೇಡದ ಸಂದರ್ಭದಲ್ಲೂ ನಗುವ ದೀಪಾಲಿಯ ಪಾತ್ರಕ್ಕೆ ಸುಂದರ ಮೊಗದ ರಿದ್ಧಿ ಕುಮಾರ್ ಸೂಕ್ತ ಆಯ್ಕೆ. ಔಷಧದ ಲೋಕದಲ್ಲಿ ಇಂಥ ಅಪಸವ್ಯಗಳು ನಡೆಯಬಹುದು ಎಂಬುದು ಮನಮುಟ್ಟುವ ವಿಚಾರ. ಆದರೆ ಚಿಕ್ಕ ಭೂಮಿಕೆಯ‌ ಒಳಗೇ ಅ ಪಾತ್ರಕ್ಕೆ ಚೌಕಟ್ಟು ಹಾಕಿದ್ದಿದ್ದರೆ ಚೊಕ್ಕವಾಗಿರುತ್ತಿತ್ತು. ಉದ್ದ ಎಳೆದು ಹಾಳುಗೆಡವಲಾಗಿದೆ. ಉಪಮೆ-ಪ್ರತಿಮೆಗಳ ಹಿನ್ನೆಲೆಯಲ್ಲಿ ಆ ಪಾತ್ರದ ಪರಿಧಿ ನ್ಯಾಯಸಮ್ಮತವಿರಬಹುದು. ಆದರೆ ನೋಡಿ ಸವಿಯುವ ಅನುಭೂತಿಗೆ ಅಗತ್ಯವಿರಲಿಲ್ಲ.

ಮುಖ್ಯ ಪಾತ್ರ ಡಾ. ಗೌರಿ ನಾಥ್ ರಾಕ್ಷಸಿ ಸ್ವರೂಪ. ಮಂದ ಪ್ರತಿಕ್ರಿಯೆಗಳ ಮೂಲಕ ಆ ಗುಣಗಳನ್ನು ತೋರಿಸುವ ಶೇಫಾಲಿ‌ ಶಾ ಅಭಿನಯದಲ್ಲಿ ಹೊಸತನವಿದೆ. ಮೌಲ್ಯಗಳ ಅಷ್ಟೂ ನೆಲೆಗಟ್ಟನ್ನು ಮೀರಿರುವ ಆ ಪಾತ್ರಚಿತ್ರಣ ತರ್ಕಬದ್ಧ. ಡಾ. ಸೈರಾ ಪಾತ್ರಧಾರಿ ಕೃತಿ ಕುಲ್ಹಾರಿಯದ್ದೂ ಅಭಿನಯ‌ ಒಳ್ಳೆಯದೇ. ಆದರೆ ಆ ಪಾತ್ರ ಅನಗತ್ಯ ಅಂಶಗಳನ್ನು ಮೈಮೇಲೆ ಹಾಕಿಕೊಂಡಿದೆ. ಆಕೆಯನ್ನು ಸಲಿಂಗಿಯಾಗಿಸಿದ್ದು ‘ಹ್ಯೂಮನ್’ ಹೇಳಹೊರಟಿರುವ ವಿಷಯಕ್ಕೆ ಯಾವುದೇ ರೀತಿಯಲ್ಲೂ ಅಗತ್ಯವೆಂದು ಕಾಣದು. ಇಂಥ ಕತೆಯಲ್ಲಿ ಸಲಿಂಗ ಕಾಮದ ವಿಚಾರ ಹೇಗೆ ಮತ್ತು ಯಾಕೆ ಪ್ರಸ್ತುತ ಎಂಬುದನ್ನು ಕತೆಗಾರರ ತಂಡ ಸಂದರ್ಶನಗಳಲ್ಲಿ ತಿಳಿಸಬೇಕಷ್ಟೆ. ಭಿನ್ನ ಲೈಂಗಿಕ ಆಸಕ್ತಿಯ ವಿಚಾರಗಳು ಅವರಿಗೆ ಈಗಿನ ಕಾಲದಲ್ಲಿ ಪ್ರಸ್ತುತ ಅನಿಸಿರಬಹುದು. ಆದರೆ ಆ ಬಗ್ಗೆ ಹೇಳಲು ಬೇರೆಯದೇ ಕತೆ ಮಾಡಿಕೊಳ್ಳಬಹುದಿತ್ತು, ಇಲ್ಲಿ ತುರುಕುವ ಅಗತ್ಯವಿರಲಿಲ್ಲ. ಕಾರ್ಪೋರೇಟ್ ಆಸ್ಪತ್ರೆ, ಔಷಧ ಪ್ರಯೋಗಳ ಹಿಂದಿನ ಅಮಾನವೀಯ ನಡವಳಿಕೆ, ವೈದ್ಯ ಲೋಕದ ಕೆಡುಕುಗಳನ್ನು ಹೇಳುವಲ್ಲಿ ಲೈಂಗಿಕ ಧೋರಣೆಯ ವಿಚಾರ ಹೂದೋಟದಲ್ಲಿ ಬೆಳೆದ ಕಳೆಗಿಡ.

LEAVE A REPLY

Connect with

Please enter your comment!
Please enter your name here