ನಿಧಾನಗತಿಯಲ್ಲೇ ಶುರುವಾಗಿ ಸಾಗುವ ಈ ಚಿತ್ರ ನಿಧಾನವಾಗೇ ಮನಸ್ಸನ್ನು ಆವರಿಸಿಕೊಳ್ಳುತ್ತಾ ಇಷ್ಟವಾಗುತ್ತಾ ಹೋಗುತ್ತದೆ. ಕಥಾನಿರೂಪಣೆ ಮಾಮೂಲಿನಂತೆ ಇಲ್ಲದೆ ತುಸು ವಿಭಿನ್ನವಾಗಿದ್ದು ಅಲ್ಲಲ್ಲಿ ಸ್ವಲ್ಪ ಅಸಹಜತೆ ಭಾಸವಾಗುತ್ತದೆ. ಕ್ಷಮೆ ಮತ್ತು ಸಾಂಗತ್ಯ ಒಬ್ಬರಿಗೆ ನಾವು ಕೊಡಬಹುದಾದ ಅತ್ಯಂತ ದೊಡ್ಡ ಉಡುಗೊರೆ ಎನ್ನುವ ಸಂದೇಶ ಸಾರುವ ‘ಮಸ್ತ್ ಮೆ ರಹನೆ ಕಾ’ ಹಿಂದಿ ಸಿನಿಮಾ Amazon Primeನಲ್ಲಿ ಸ್ಟ್ರೀಮ್ ಆಗುತ್ತಿದೆ.
ವರ್ಷಾನುಗಟ್ಟಲೆ ಜೊತೆಗೆ ಬಾಳ್ವೆ ಮಾಡಿದ ಸಂಗಾತಿ ತೀರಿಕೊಂಡುಬಿಟ್ಟರೆ ಆಗುವ ಖಾಲಿತನ ಅಗಾಧ. ಆ ಸ್ಥಳವನ್ನು ಮತ್ತೆ ಯಾರೋ ಬಂದು ತುಂಬಬಹುದು ಅನ್ನೋ ನಿರೀಕ್ಷೆಯನ್ನು ಬಹಳ ಜನ ಇಟ್ಟುಕೊಳ್ಳುವುದಿಲ್ಲ. ಆದರೂ ಕೆಲ ಮನಸ್ಸುಗಳು ಅಂಥ ಒಬ್ಬ ಸಂಗಾತಿಗಾಗಿ ಹಾತೊರೆಯುವುದು ಕೂಡ ಅಪರೂಪವೇನಲ್ಲ. ಈ ರೀತಿಯಾದ ಎರಡು ಒಂಟಿ ಮನಸ್ಸುಗಳು ಒಂದಾಗುವ ಕಥೆಯೇ ‘ಮಸ್ತ್ ಮೆ ರಹನೆ ಕಾ’. ಇದು ಕ್ಷಮೆ, ಪಶ್ಚಾತ್ತಾಪ ಮತ್ತು ಜೀವನದಲ್ಲಿ ಎದುರಾಗುವ ಎರಡನೇ ಅವಕಾಶಗಳು ಮತ್ತು ಸವಾಲುಗಳ ಕಥೆಯೂ ಹೌದು.
ಇಬ್ಬರು ಹಿರಿಯ ವಯಸ್ಸಿನ ಒಂಟಿಯಾಗಿ ಬದುಕುತ್ತಿರುವ ವ್ಯಕ್ತಿಗಳ ನಡುವೆ ಪರಿಚಯ, ಸ್ನೇಹ, ಪ್ರೇಮ ಮೂಡುವ ಕಥೆಗಳು ಸಾಕಷ್ಟು ಬಂದು ಹೋಗಿವೆ. ಇದಕ್ಕೆ ಮೊದಲು ನೀನಾ ಗುಪ್ತ, ಅನುಪಮ್ ಖೇರ್ ಅವರೊಡನೆ ಇಂಥದ್ದೆ ಕಥೆ ಇರುವ ಚಿತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ‘ಮಸ್ತ್ ಮೆ ರಹನೆ ಕಾ’ ಚಿತ್ರದಲ್ಲಿ ಸ್ವಲ್ಪ ಜೋರುಮಾತಿನ ಹೆಂಗಸಾಗಿ ಚಟಪಟನೆ ಸಿಡಿಯುವ ಪಂಜಾಬಿ ಹೆಂಗಸಿನ ಪಾತ್ರದಲ್ಲಿ ಸ್ವಲ್ಪ ಸಂಕೋಚ ಪ್ರವೃತ್ತಿಯ 75 ವಯಸ್ಸಿನ ವ್ಯಕ್ತಿಯ ಪಾತ್ರದ ಜಾಕಿ ಶ್ರಾಫ್ ಅವರೊಡನೆ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಒಂಟಿ ಮತ್ತು ತಮ್ಮ ತಮ್ಮ ಸಂಗಾತಿಗಳನ್ನು ಕಳೆದುಕೊಂಡು ಒಂದೇ ಥರದ ಸನ್ನಿವೇಶದಲ್ಲಿ ಇರುತ್ತಾರೆ ಎನ್ನುವುದರ ಜೊತೆಗೆ ಇಬ್ಬರ ಬದುಕಿನಲ್ಲೂ ಮತ್ತೊಂದು ಒಂದೇ ಥರದ ಸನ್ನಿವೇಶ ಉಂಟಾಗಿರುತ್ತದೆ. ಅದೇನೆಂದರೆ ನನ್ಹೆ ಎಂಬ ಕಳ್ಳನೊಬ್ಬ ಇಬ್ಬರ ಮನೆಗೂ ನುಗ್ಗಿ ಬೆಲೆಬಾಳುವ ಪದಾರ್ಥಗಳನ್ನು ದೋಚಿರುತ್ತಾನೆ.
ಇಬ್ಬರೂ ಸಾಂದರ್ಭಿಕವಾಗಿ ಭೇಟಿಯಾಗಿ ಒಂದು ಗೆಳೆತನ ಶುರುವಾಗುತ್ತದೆ. ಕಾಮತ್ ತನ್ನ ಬಗೆಗೆ ಹೇಳಿಕೊಳ್ಳುತ್ತಾ ತನ್ನ ನಿತ್ಯದ ದಿನಚರಿಯಾದ ಸರ್ವೇ ಬಗ್ಗೆ ಹೇಳುತ್ತಾ ಹೇಗೆ ತಾನು ತನ್ನಂತೆ ಒಂಟಿಯಾಗಿರುವ ವ್ಯಕ್ತಿಗಳ ಬಗ್ಗೆ, ಅವರ ದಿನಚರಿಗಳ ಮಾಹಿತಿ ಕಲೆಹಾಕುತ್ತೇನೆ, ಆದರೆ ಅವರೊಂದಿಗೆ ಮಾತನಾಡಲು ಧೈರ್ಯ ಸಾಲುವುದಿಲ್ಲ ಎನ್ನುವ ವಿಚಾರವನ್ನು ನೀನಾ ಗುಪ್ತ ಬಳಿ ಹಂಚಿಕೊಳ್ಳುತ್ತಾನೆ. ಇಬ್ಬರೂ ಸೇರಿ ಇತರರ ಮನೆಗಳಿಗೆ ಗುಟ್ಟಾಗಿ ನುಗ್ಗಿ ಕಾಲಹರಣ ಮಾಡುವ ದೃಶ್ಯಗಳಿವೆ. ಒಬ್ಬರಿಗೊಬ್ಬರು ಮೇಲ್ನೋಟಕ್ಕೆ ಬರಿ ಸ್ನೇಹಿತರಂತೆ ಕಂಡರೂ ಗಾಢವಾಗಿ ನೋಡಿದರೆ ಒಬ್ಬರಿಗೊಬ್ಬರು ಬಹಳ ಭಾವನಾತ್ಮಕ ಆಸರೆಯಾಗಿರುವುದನ್ನು ಗಮನಿಸಬಹುದು.
ಚಿತ್ರದಲ್ಲಿ ಗೆಳೆತನ, ಸಲುಗೆ ಇವೆಲ್ಲವೂ ಒಂದು ಮಜಲಾದರೆ ಮುಂಬೈ ಥರದ ಬೃಹತ್ ನಗರದಲ್ಲಿ ಬದುಕಲು ಹವಣಿಸುವ, ಹೋರಾಡುವ ನಮ್ಮ ನಿಮ್ಮೆಲ್ಲರ ಒಳಗೆ ಅಡಗಿರುವ ಮೃಗೀಯ ಭಾವ ಹೇಗೆ ಹೊರಬರುತ್ತದೆ ಎನ್ನುವ ಮಜಲನ್ನೂ ನಿರ್ದೇಶಕ ವಿಜಯ್ ಮೌರ್ಯ ಮತ್ತು ಬರಹಗಾರ್ತಿ ಪಾಯಲ್ ಆರೋರ ಕಟ್ಟಿಕೊಟ್ಟಿದ್ದಾರೆ. ನನ್ಹೆ ಟೈಲರ್ ಅಂಗಡಿಯಲ್ಲಿ ತನ್ನ ಕೆಲಸ ಕಳೆದುಕೊಂಡ ಮೇಲೆ ರಾಣಿಯನ್ನು ಭೇಟಿಯಾಗುತ್ತಾನೆ ಮತ್ತು ಅವರ ನಡುವೆ ಪ್ರೇಮ ಮೊಳೆಯುತ್ತದೆ. ಸನ್ನಿವೇಶಗಳು ಎದುರಾಗಿ ನನ್ಹೆ ಮತ್ತೆ ಕಾಮತ್ ಹಾಗೂ ಪ್ರಕಾಶ್ ಅವರ ಜೊತೆ ಮುಖಾಮುಖಿಯಾಗುವ ಸಂದರ್ಭ ಬರುತ್ತದೆ. ಈ ಘಟನೆ ಎಲ್ಲರ ಜೀವನದಲ್ಲೂ ಮತ್ತೆ ತಿರುವನ್ನು ಕೊಡುತ್ತದೆ. ಈ ಚಿತ್ರದ ಆಸಕ್ತಿಕರ ಅಂಶ ಎಂದರೆ ಎರಡೂ ಕಥೆಗಳ ನಿರೂಪಣೆ. ಪ್ರಕಾಶ್ ಹಾಗೂ ಕಾಮತ್ ಮತ್ತು ನನ್ಹೆ ಇಬ್ಬರ ಕಥೆಗಳನ್ನೂ, ಅವರು ಮತ್ತೊಬ್ಬರ ಮನೆಯೊಳಗೆ ಗುಟ್ಟಾಗಿ ನುಗ್ಗುವ ಸನ್ನಿವೇಶ, ಉದ್ದೇಶ ಹಾಗೂ ಸಂದರ್ಭಗಳನ್ನು ಸಮಾನಾಂತರವಾಗಿ ತೋರಿಸಲಾಗಿದೆ. ಕಾರಣ ಏನೇ ಇರಲಿ ನೈತಿಕವಾಗಿ ಎಲ್ಲರೂ ಏಣಿಯ ಒಂದೇ ಮೆಟ್ಟಿಲಲ್ಲಿ ನಿಲ್ಲುವುದು ವಿಸ್ಮಯ.
ಜಾಕಿ ಶ್ರಾಫ್ ಮತ್ತು ನೀನಾ ಗುಪ್ತರ ಜೋಡಿ ತೆರೆಯ ಮೇಲೆ ಬಹಳ ಚೆನ್ನಾಗಿ ಚಿತ್ರಿತವಾಗಿದೆ. ಇಬ್ಬರ ಅಭಿನಯವೂ ಅಚ್ಚುಕಟ್ಟು. ಲಘುವಾಗಿಯೂ, ಗಾಢವಾಗಿಯೂ, ಭಾವುಕವಾಗಿಯೂ, ತಮಾಷೆಯಾಗಿಯೂ ಎಲ್ಲ ರೀತಿಯಲ್ಲಿ ಮನಸ್ಸನ್ನು ಗೆಲ್ಲುವ ಜೋಡಿ ಇವರದ್ದು. ಅದರಲ್ಲೂ ಚಿತ್ರದ ಅಂತ್ಯದಲ್ಲಿ ಬದುಕನ್ನು ವೀಡಿಯೊ ಗೇಮ್‌ಗೆ ಹೋಲಿಸಿ ಮಾತನಾಡಿರುವ ಸನ್ನಿವೇಶದಲ್ಲಿ ಜಾಕಿ ಶ್ರಾಫ್ ಅವರದ್ದು ಅಮೋಘ ಅಭಿನಯ. ನನ್ಹೆ ಪಾತ್ರದಲ್ಲಿ ಅಭಿಷೇಕ್ ಚೌಹಾನ್ ಅಭಿನಯವೂ ಪ್ರಶಂಸನೀಯ. ರಾಣಿ ಪಾತ್ರದಲ್ಲಿ ಮೋನಿಕಾ ಅವರ ಅಭಿನಯವಂತೂ ಬಹಳ ಸೊಗಸಾಗಿದೆ. ದಿಟ್ಟ ನಿಲುವಿನ ಗಟ್ಟಿ ಹೆಣ್ಣಾಗಿ ಅವರ ಪಾತ್ರ ಮತ್ತು ಅಭಿನಯ ಮನಸ್ಸಲ್ಲಿ ನಿಲ್ಲುತ್ತದೆ. ಚಿತ್ರದ ಉದ್ದಕ್ಕೂ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ನೃತ್ಯ ನಿರ್ದೇಶಕಿ ಪಾತ್ರ ಮಾಡಿರುವ ಮಾಡಿರುವ ರಾಖಿ ಸಾವಂತ್ ಪಾತ್ರ ಗಮನ ಸೆಳೆಯುತ್ತದೆ.
ತುಸು ನಿಧಾನಗತಿಯಲ್ಲೇ ಶುರುವಾಗಿ ಸಾಗುವ ಈ ಚಿತ್ರ ನಿಧಾನವಾಗೇ ಮನಸ್ಸನ್ನು ಆವರಿಸಿಕೊಳ್ಳುತ್ತಾ ಇಷ್ಟವಾಗುತ್ತಾ ಹೋಗುತ್ತದೆ. ಕಥಾನಿರೂಪಣೆ ಮಾಮೂಲಿನಂತೆ ಇಲ್ಲದೆ ತುಸು ವಿಭಿನ್ನವಾಗಿದ್ದು ಅಲ್ಲಲ್ಲಿ ಸ್ವಲ್ಪ ಅಸಹಜತೆ ಭಾಸವಾಗುತ್ತದೆ. ಆದರೂ ಎಂಥವರೇ ಆಗಲಿ ಎಲ್ಲರೂ ಜೀವನದಲ್ಲಿ ಎರಡನೇ ಅವಕಾಶಕ್ಕೆ ಅರ್ಹರು. ಕ್ಷಮೆ ಮತ್ತು ಸಾಂಗತ್ಯ ಒಬ್ಬರಿಗೆ ನಾವು ಕೊಡಬಹುದಾದ ಅತ್ಯಂತ ದೊಡ್ಡ ಉಡುಗೊರೆ ಎನ್ನುವ ಸಂದೇಶವನ್ನು ಸಾರುವ ‘ಮಸ್ತ್ ಮೆ ರಹನೆ ಕಾ’ ಮನಸ್ಸನ್ನು ಬೆಚ್ಚಗಾಗಿಸುವ ಒಮ್ಮೆ ನೋಡಲೇಬೇಕಾದ ಸುಂದರ ಚಿತ್ರ. ಈ ಸಿನಿಮಾ ಅಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್ ಆಗುತ್ತಿದೆ.