ತೆಲುಗು ನಟ ಕಲ್ಯಾಣ್‌ ರಾಮ್‌ ನಟನೆಯ ‘ಡೆವಿಲ್‌’ ತೆಲುಗು ಸಿನಿಮಾದ ಟೀಸರ್‌ ಬಿಡುಗಡೆಯಾಗಿದೆ. ಇಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟನಿಗೆ ಚಿತ್ರತಂಡದ ಉಡುಗೊರೆಯಿದು. ವಿಶಿಷ್ಟ ಕತೆಗಳ ಸಿನಿಮಾಗಳನ್ನು ಆಯ್ಕೆ ಮಾಡಿಕೊಳ್ಳುವ ಕಲ್ಯಾಣ್‌ ಈ ಬಾರಿಯೂ ‘ಡೆವಿಲ್‌’ನಲ್ಲಿ ಹೊಸತನಕ್ಕೆ ತೆರೆದುಕೊಂಡಿದ್ದಾರೆ.

ಕಲ್ಯಾಣ್‌ ರಾಮ್‌ ಬರ್ತ್‌ಡೇಗೆಂದು ‘ಡೆವಿಲ್‌’ ಚಿತ್ರತಂಡ ಟೀಸರ್‌ ಬಿಡುಗಡೆ ಮಾಡಿದೆ. ಒಂದು ನಿಮಿಷದ ಈ ಟೀಸರ್‌ನಲ್ಲಿ ಇದು ಸ್ವಾತಂತ್ರ್ಯ ಪೂರ್ವದ ಬ್ರಿಟಿಷ್‌ ಏಜೆಂಟ್‌ ಕತೆ ಎನ್ನುವುದು ತಿಳಿದುಬರುತ್ತದೆ. ಗೂಢಚಾರಿ ಹೇಗಿರಬೇಕು ಎನ್ನುವುದರ ವಿವರಣೆಯೊಂದಿಗೆ ಹೀರೋ ಪಾತ್ರದ ಪರಿಚಯ ಸಿಗುತ್ತದೆ. ಕಲ್ಯಾಣ್‌ಗೆ ಜೋಡಿಯಾಗಿ ಸಂಯುಕ್ತಾ ಮೆನನ್‌ ನಟಿಸಿದ್ದು, ಸಿನಿಮಾ ಅದ್ಧೂರಿಯಾಗಿ ತಯಾರಾಗಿರುವ ಸೂಚನೆ ಸಿಗುತ್ತದೆ. ಸಿನಿಮಾವನ್ನು ದೇವಾಂಶ್ ನಾಮಾ ಪ್ರೆಸೆಂಟ್ ಮಾಡುತ್ತಿದ್ದು, ಅಭಿಷೇಕ್ ಪಿಕ್ಚರ್ಸ್ ಬ್ಯಾನರ್ ನಿರ್ಮಿಸಿದೆ. ನವೀನ್ ಮೇಡಾರಂ ನಿರ್ದೇಶನದ ಡೆವಿಲ್ ಚಿತ್ರಕ್ಕೆ ಶ್ರೀಕಾಂತ್‌ ವಿಸ್ಸಾ ಕತೆ, ಚಿತ್ರಕಥೆ ಮತ್ತು ಸಂಭಾಷಣೆ ಒದಗಿಸಿದ್ದಾರೆ. ಹರ್ಷವರ್ಧನ್ ರಾಮೇಶ್ವರ್ ಸಂಗೀತ, ಸೌಂದರರಾಜನ್ ಛಾಯಾಗ್ರಹಣ ಚಿತ್ರಕ್ಕಿದೆ. ಮೂಲ ತೆಲುಗು ಸೇರಿದಂತೆ ಕನ್ನಡ, ತಮಿಳು ಮತ್ತು ಮಲಯಾಳಂ ಡಬ್ಬಿಂಗ್‌ ಅವತರಣಿಕೆಗಳಲ್ಲಿ ಸಿನಿಮಾ ಥಿಯೇಟರ್‌ಗೆ ಬರಲಿದೆ.

ಹೊಸ ಸಿನಿಮಾ : ಕಲ್ಯಾಣ್‌ ರಾಮ್‌ ಹುಟ್ಟುಹಬ್ಬದ ದಿನವಾದ ಇಂದು ಅವರ ನೂತನ ಚಿತ್ರ ಘೋಷಣೆಯಾಗಿದೆ. ಅಶೋಕ ಕ್ರಿಯೇಷನ್ ಹಾಗೂ NTR ಆರ್ಟ್ಸ್ ಬ್ಯಾನರ್‌ನಡಿ ಮೂಡಿಬರುತ್ತಿರುವ ಚಿತ್ರವನ್ನು ಪ್ರದೀಪ್ ಚಿಲುಕುರಿ ನಿರ್ದೇಶಿಸಲಿದ್ದಾರೆ. ಕಲ್ಯಾಣ್ ರಾಮ್ ಸಿನಿಮಾ ಕರಿಯರ್‌ನಲ್ಲಿ ಅತಿ ದೊಡ್ಡ ಬಜೆಟ್ ಚಿತ್ರ ಇದಾಗಲಿದೆ. ಹರಿಕೃಷ್ಣ ಭಂಡಾರಿ ಚಿತ್ರಕಥೆ ರಚಿಸಿದ್ದು, ಇನ್ನುಳಿದ ತಾರಾಬಳಗ ಮತ್ತು ತಂತ್ರಜ್ಞರ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ಸಿಗಲಿದೆ. ಈ ಹಿಂದೆ NTR ಆರ್ಟ್ಸ್ ಬ್ಯಾನರ್‌ನಡಿ ಕಲ್ಯಾಣ್ ರಾಮ್ ನಟಿಸಿದ್ದ ‘ಬಿಂಬಿಸಾರ’ ಸಿನಿಮಾ ದೊಡ್ಡ ಯಶಸ್ಸು ಕಂಡಿತ್ತು. ಇದೇ ಬ್ಯಾನರ್ ನಡಿ ಪ್ರಶಾಂತ್ ನೀಲ್ ಮತ್ತು ಜ್ಯೂನಿಯರ್‌ NTR ಸಿನಿಮಾ ತಯಾರಾಗಲಿದೆ.

Previous articleಅಲ್ಫೋನ್ಸ್‌ ಪುತ್ರೆನ್‌ ‘ಗಿಫ್ಟ್‌’ ತಮಿಳು ಸಿನಿಮಾಗೆ ಇಳಯರಾಜ ಸಂಗೀತ
Next article‘ರಾನಿ’ ಟೀಸರ್‌ | ಗುರುತೇಜ್‌ ಶೆಟ್ಟಿ ನಿರ್ದೇಶನದಲ್ಲಿ ಕಿರಣ್‌ ರಾಜ್‌ ಆಕ್ಷನ್‌ ಸಿನಿಮಾ

LEAVE A REPLY

Connect with

Please enter your comment!
Please enter your name here