ತಮಿಳು, ಮಲಯಾಳಂನಲ್ಲಿ ಶೋಷಿತ ಸಮುದಾಯದ ಹಲವು ಕತೆಗಳು ಬೆಳ್ಳಿತೆರೆಗೆ ಬರುತ್ತಿವೆ. ಈ ಹಾದಿಯಲ್ಲೊಂದು ದಿಟ್ಟ ಕನ್ನಡದ ಪ್ರಯತ್ನವಾಗಿ ‘ಪಾಲಾರ್’ ಸುದ್ದಿ ಮಾಡುತ್ತಿದೆ. ‘ಸಿನಿಮಾ ಬಂಡಿ’ ತೆಲುಗು ಸಿನಿಮಾ ಖ್ಯಾತಿಯ ಉಮಾ ಕೋಲಾರ ಚಿತ್ರದ ನಾಯಕಿ. ಜೀವಾ ನವೀನ್‌ ನಿರ್ದೇಶನದ ಸಿನಿಮಾ ಫೆಬ್ರವರಿ 24ರಂದು ತೆರೆಕಾಣಲಿದೆ.

”ಸುಮಾರು ವರ್ಷಗಳ ಹಿಂದೆ ಕೋಲಾರ ಮತ್ತು ದೇವನಹಳ್ಳಿ ಭಾಗದಲ್ಲಿ ನಡೆದ ನೈಜಘಟನೆಗಳನ್ನು ಆಧರಿಸಿ ಈ ಚಿತ್ರಕಥೆ ಹೆಣೆದಿದ್ದೇವೆ. ಇದೊಂದು ಮಹಿಳಾ ಪ್ರಧಾನ, ಸಂಘರ್ಷದ, ಹೋರಾಟದ ಕಥನ. ಚಿಕ್ಕ ವಯಸಿನಿಂದ ಸಿನಿಮಾ ಬಗ್ಗೆ ಆಸಕ್ತಿ. ನಮ್ಮ ಜೀವನದಲ್ಲಿ ನಡೆದ, ನಾನು ನೋಡಿದಂಥ ಘಟನೆಗಳನ್ನಿಟ್ಟುಕೊಂಡು ಸಿನಿಮಾ ಮಾಡಿದ್ದೇನೆ. ಕಥೆ, ಸಿನಿಮಾ ಮೇಲೆ ನಂಬಿಕೆಯಿದೆ. ಕಂಟೆಂಟ್ ಬೇಸ್ಡ್‌ ಸಿನಿಮಾವಿದು” ಎನ್ನುತ್ತಾರೆ ‘ಪಾಲಾರ್‌’ ಸಿನಿಮಾ ನಿರ್ದೇಶಕ ಜೀವಾ ನವೀನ್‌. ಕನ್ನಡ ಕಿರುತೆರೆಯ ‘ಕನ್ನಡ ಕೋಗಿಲೆ’ ಮ್ಯೂಸಿಕ್‌ ರಿಯಾಲಿಟಿ ಶೋನೊಂದಿಗೆ ಕನ್ನಡಿಗರಿಗೆ ಪರಿಚಿತರಾದ ಉಮಾ ಕೋಲಾರ ಅವರು ಚಿತ್ರದ ನಾಯಕಿ. ಅವರು ನಟಿಸಿದ ‘ಸಿನಿಮಾ ಬಂಡಿ’ ತೆಲುಗು ಸಿನಿಮಾ ಕಂಟೆಂಟ್‌ ಕಾರಣಕ್ಕೆ ಸುದ್ದಿಯಾಗಿತ್ತು. ‘ಇದು ನಮ್ಮ ನಡುವಿನ ಕಥೆ’ ಎಂದು ‘ಪಾಲಾರ್‌’ ಚಿತ್ರದ ಬಗ್ಗೆ ಹೇಳುತ್ತಾರವರು.

ಪಾಲಾರ್‌ ನದಿಗೂ, ತಮ್ಮ ಚಿತ್ರದ ಕತೆಗೂ ಯಾವುದೇ ಸಂಬಂಧವಿಲ್ಲ ಎಂದು ನಿರ್ದೇಶಕರು ಸ್ಪಷ್ಟಪಡಿಸುತ್ತಾರೆ. ಒಂದು ರೂಪಕವಾಗಿ ಚಿತ್ರಕ್ಕೆ ಈ ಶೀರ್ಷಿಕೆ ಅಳವಡಿಸಿದ್ದಾಗಿ ಹೇಳುತ್ತಾರೆ. ಪಾಲಾರ್‌ ಎನ್ನುವ ಕಾಲ್ಪನಿಕ ಹಳ್ಳಿಯಲ್ಲಿ ನಡೆಯುವ ಕತೆಯಿದು. ಬಾಗೇಪಲ್ಲಿ, ಕೋಲಾರ, ದೇವನಹಳ್ಳಿ, ಚಿಕ್ಕಾಬಳ್ಳಾಪುರ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಫೆಬ್ರವರಿ 24ರಂದು ಸಿನಿಮಾ ತೆರೆಕಾಣಲಿದ್ದು, ಸತ್ಯ ಸಿನಿ ಡಿಸ್ಟ್ರಿಬ್ಯೂಟರ್ಸ್‌ ಮೂಲಕ ಮಂಜುನಾಥ್‌ ಅವರು ಚಿತ್ರದ ವಿತರಣೆ ಜವಾಬ್ದಾರಿ ಹೊತ್ತಿದ್ದಾರೆ. ಇಂತಹ ಸಿನಿಮಾಗಳು ಹೆಚ್ಚೆಚ್ಚು ಜನರನ್ನು ತಲುಪಬೇಕು ಎನ್ನುವುದು ಅವರ ಆಶಯ. ತಿಲಕ್‌ ರಾಜ್‌ ಚಿತ್ರದ ನಾಯಕ. ಸುಮಾರು ನೂರಕ್ಕೂ ಹೆಚ್ಚು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ವರದರಾಜ್‌ ಚಿಕ್ಕಬಳ್ಳಾಪುರ ರಚನೆಯ ನಾಲ್ಕು ಹಾಡುಗಳಿಗೆ ಸುಬ್ರಹ್ಮಣ್ಯ ಆಚಾರ್ಯ ಸಂಗೀತ ಸಂಯೋಜಿಸಿದ್ದಾರೆ. ಸೌನವಿ ಕ್ರಿಯೇಷನ್ ಮತ್ತು ಹೆಲೋ ಗ್ಲೋಬಲ್ ಬ್ಯಾನರ್ ಜೊತೆಗೂಡಿ ನಿರ್ಮಿಸಿರುವ ಸಿನಿಮಾ ಸೆಟ್ಟೇರಿದಿಂದಾಗಿನಿಂದಲೂ ಸುದ್ದಿಯಲ್ಲಿದೆ.

LEAVE A REPLY

Connect with

Please enter your comment!
Please enter your name here