ಬಹುನಿರೀಕ್ಷಿತ ‘ರಾಧೆ ಶ್ಯಾಮ್‌’ ಸಿನಿಮಾದ ಟ್ರೈಲರ್‌ ಬಿಡುಗಡೆಯಾಗಿದ್ದು, ಇದೊಂದು ಟ್ರ್ಯಾಜಿಕ್‌ ಲವ್‌ಸ್ಟೋರಿ ಇರಬಹುದು ಎನ್ನುವ ಸೂಚನೆ ಸಿಕ್ಕಿದೆ. ರಾಧಾಕೃಷ್ಣ ಕುಮಾರ್‌ ನಿರ್ದೇಶನದ ಸಿನಿಮಾ 2022ರ ಜನವರಿ 14ರಂದು ತೆರೆಕಾಣಲಿದೆ.

ಭಾರತದ ಬಹುನಿರೀಕ್ಷಿತ ಸಿನಿಮಾಗಳ ಪಟ್ಟಿಯಲ್ಲಿ ‘ರಾಧೆ ಶ್ಯಾಮ್‌’ ಮುಂಚೂಣಿಯಲ್ಲಿದೆ. ಇಲ್ಲಿಯವರೆಗಿನ ಹಾಡು, ಟೀಸರ್‌ನಲ್ಲಿ ಇದೊಂದು ಲವ್‌ಸ್ಟೋರಿ ಎನ್ನುವ ಸುಳಿವು ಸಿಕ್ಕಿತ್ತು. ಇಂದು ಬಿಡುಗಡೆಯಾಗಿರುವ ಟ್ರೈಲರ್‌ನಲ್ಲಿ ಬಹುಪಾಲು ಚಿತ್ರದ ಕತೆಯೇ ರಿವೀಲ್‌ ಆದಂತಾಗಿದೆ. ಟ್ರೈಲರ್‌ನ ಮೊದಲಾರ್ಧದಲ್ಲಿ ವಿಕ್ರಮಾದಿತ್ಯ (ಪ್ರಭಾಸ್‌) ಒಬ್ಬ ಫ್ಲರ್ಟ್‌ ಎನ್ನುವಂತೆ ತೋರಿಸಲಾಗಿದೆ. ಪ್ರೀತಿ, ಎಮೋಷನ್‌ಗಳು ತನ್ನ ವ್ಯಕ್ತಿತ್ವಕ್ಕೆ ಒಗ್ಗುವುದಿಲ್ಲ ಎನ್ನುವುದು ಈ ಪಾತ್ರದ ಧೋರಣೆ. ಕ್ರಮೇಣ ಆತ ಪ್ರೇರಣಾಳಲ್ಲಿ (ಪೂಜಾ ಹೆಗ್ಡೆ) ಅನುರಕ್ತನಾಗುತ್ತಾನೆ. ಇವರ ಪ್ರೀತಿ ಫೇರಿಟೇಲ್‌ನಂತೆ ಭಾಸವಾಗುತ್ತದೆ. ಮುಂದಿನ ಸನ್ನಿವೇಶಗಳಲ್ಲಿ ವಿಕ್ರಮಾದಿತ್ಯನನ್ನು ಹಸ್ತಸಾಮುದ್ರಿಕೆಯಲ್ಲಿ ವಿಶೇಷ ಪರಿಣತಿ ಹೊಂದಿರುವವನು, ವ್ಯಕ್ತಿಯೊಬ್ಬನ ಹುಟ್ಟಿನಿಂದ ಸಾವಿನವರೆಗಿನ ಬದುಕಿನ ಕತೆಯನ್ನು ನಿಖರವಾಗಿ ಹೇಳಬಲ್ಲ ಎನ್ನುವಂತೆ ತೋರಿಸಲಾಗಿದೆ.

ದ್ವಿತಿಯಾರ್ಧದಲ್ಲಿ ವಿಕ್ರಮಾದಿತ್ಯ ಮತ್ತು ಪ್ರೇರಣಾರ ಲವ್‌ಸ್ಟೋರಿ ಪರೀಕ್ಷೆಗೊಳಪಡುತ್ತದೆ. ಸಾಗರದಲ್ಲಿ ಮುಳುಗುವ ಹಡಗು, ರಕ್ತ ಮೆತ್ತಿದ ಹಸ್ತಗಳ ಸನ್ನಿವೇಶಗಳು ಇದೊಂದು ಟ್ರ್ಯಾಜಿಕ್‌ ಲವ್‌ಸ್ಟೋರಿ ಎನ್ನುವ ಸೂಚನೆ ನೀಡುತ್ತವೆ. ನಟ ಪ್ರಭಾಸ್‌ ತಮ್ಮ ಸೋಷಿಯಲ್‌ ಮೀಡಿಯಾ ಅಕೌಂಟ್‌ನಲ್ಲಿ ಟ್ರೈಲರ್‌ ಶೇರ್‌ ಮಾಡಿ, “ರಾಧೆಶ್ಯಾಮರ ಪ್ರೀತಿಯ ಅನುಭವ ನಿಮ್ಮದಾಗಿಸಿಕೊಳ್ಳಿ. ಟ್ರೈಲರ್‌ನಲ್ಲಿ ವಿಕ್ರಮಾದಿತ್ಯ ಮತ್ತು ಪ್ರೇರಣಾರ ಮ್ಯಾಜಿಕಲ್‌ ಜರ್ನೀ ನೋಡಿ” ಎಂದು ಬರೆದಿದ್ದಾರೆ. 70ರ ದಶಕದ ಬ್ಯಾಕ್‌ಡ್ರಾಪ್‌ನ‌ ಯೂರೋಪಿನಲ್ಲಿ ನಡೆಯುವ ಕತೆಯನ್ನು ಚಿತ್ರದಲ್ಲಿ ಹೇಳಲಾಗಿದೆ. 2018ರಲ್ಲಿ ಶುರುವಾದ ಸಿನಿಮಾ ಈ ವರ್ಷ ಜುಲೈಗೆ ಚಿತ್ರೀಕರಣ ಪೂರ್ಣಗೊಳಿಸಿಕೊಂಡು 2022ರ ಜನವರಿ 14ಕ್ಕೆ ತೆರೆಕಾಣುತ್ತಿದೆ. ಸಚಿನ್‌ ಖೇಡೇಕರ್‌, ಭಾಗ್ಯಶ್ರೀ, ಕುನಾಲ್‌ ರಾಯ್‌ ಕಪೂರ್‌, ಸತ್ಯನ್‌, ಪ್ರಿಯದರ್ಶಿ, ಮುರಳಿ ಶರ್ಮಾ, ರಿದ್ಧಿ ಕುಮಾರ್‌ ಇತರರು ನಟಿಸಿದ್ದಾರೆ.

LEAVE A REPLY

Connect with

Please enter your comment!
Please enter your name here