ಚುರುಕು ಮತ್ತು ಲವಲವಿಕೆಯ ಸಂಭಾಷಣೆ ಈ ಚಿತ್ರದ ಹೈಲೈಟ್. ಚಿತ್ರದ ಮುಖ್ಯ ಹಿನ್ನಡೆ ಎಂದರೆ ದ್ವಿತಿಯಾರ್ಧದ ಚಿತ್ರಕಥೆ. ಇನ್ನೊಂದು ಚೂರು ಬಿಗಿಯಾಗಿದ್ದಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು. ಕೆಲವು ಪಾತ್ರಗಳನ್ನು ಇನ್ನೂ ಉತ್ತಮವಾಗಿ ಬೆಳೆಸಿ ಬಳಸಿಕೊಳ್ಳಬಹುದಿತ್ತು. ನಿರ್ದೇಶಕರು ಹಾಸ್ಯಕ್ಕೆ ಒತ್ತುಕೊಟ್ಟು ಭಾವನಾತ್ಮಕ ದೃಶ್ಯಗಳನ್ನು ಕಡೆಗಣಿಸಿದ್ದಾರೆ ಎನಿಸುತ್ತದೆ. ‘ಸಾಮಜವರಗಮನ’ ತೆಲುಗು ಸಿನಿಮಾ ahaದಲ್ಲಿ ಸ್ಟ್ರೀಮ್‌ ಆಗುತ್ತಿದೆ.

ರಾಮ್ ಅಬ್ಬರಾಜು ನಿರ್ದೇಶನದ ‘ಸಾಮಜವರಗಮನ’ ಬಿಡುಗಡೆಗೂ ಮುನ್ನವೇ ಬಹಳ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ. ಶ್ರೀ ವಿಷ್ಣು ನಾಯಕನಾಗಿರುವ ಈ ಚಿತ್ರ ಸಿನಿಪ್ರಿಯರಲ್ಲಿ ಬಹಳ ಕುತೂಹಲ ಹುಟ್ಟಿಸಿತ್ತು. ಚಿತ್ರದಲ್ಲಿ ನಾಯಕ ಬಾಲು ಹೈದರಾಬಾದಿನ ಜನಪ್ರಿಯ ಮಲ್ಟಿಪ್ಲೆಕ್ಸ್ ಒಂದರಲ್ಲಿ ಟಿಕೆಟ್ ಮಾರುವ ಉದ್ಯೋಗದಲ್ಲಿರುತ್ತಾನೆ. ಆತನ ತಂದೆ ಉಮಾ ಮಹೇಶ್ವರ ರಾವ್ ವಯಸ್ಸನಲ್ಲಿ ಹಿರಿಯನಾದರೂ ಓದುವ ಆಸೆ ಮತ್ತು ಛಲದೊಂದಿಗೆ ತನ್ನ ಪದವಿ ಶಿಕ್ಷಣ ಮುಗಿಸುವ ಪ್ರಯತ್ನದಲ್ಲಿರುತ್ತಾನೆ. ಪದವಿ ಮುಗಿಸಿದರೆ ಮಾತ್ರ ನೂರಾರು ಕೋಟಿ ಆಸ್ತಿಗೆ ಹಕ್ಕುದಾರನಾಗಲು ಸಾಧ್ಯ ಎನ್ನುವ ಅವರ ತಂದೆಯ ಕರಾರು ಆತನನ್ನು ಪದವಿ ಪರೀಕ್ಷೆ ಬರೆಯಲು ಉತ್ತೇಜನ ನೀಡುತ್ತಿರುತ್ತದೆ.

ಆದರೆ ಎಷ್ಟೇ ಸೈಕಲ್ ಹೊಡೆದರೂ ಪರೀಕ್ಷೆ ಪಾಸ್ ಮಾಡಲು ಆಗದೇ ಒದ್ದಾಡುವ ಉಮಾ ಮಹೇಶ್ವರನಿಗೆ ಪರೀಕ್ಷೆ ಸಮಯದಲ್ಲೇ ನಾಯಕಿ ಸರಯೂ ಪರಿಚಯವಾಗುತ್ತದೆ. ಆಕೆಯೂ ಓದಿನಲ್ಲಿ ಅಷ್ಟಕ್ಕಷ್ಟೇ. ಅವರಿಬ್ಬರಿಗೂ ಒಳ್ಳೆಯ ಸ್ನೇಹ. ಸಂದರ್ಭಗಳು ಎದುರಾಗಿ ಸರಯೂ, ಉಮಾ ಮಹೇಶ್ವರನ ಮನೆಯಲ್ಲಿ ಪೇಯಿಂಗ್ ಗೆಸ್ಟ್ ಆಗಿ ತಂಗುತ್ತಾಳೆ. ನಾಯಕ ಬಾಲುವಿನ ಪರಿಚಯವಾಗುತ್ತದೆ. ಸ್ನೇಹ ಸಲುಗೆ ಬೆಳೆದು ಪ್ರೀತಿ ಆಯ್ತು ಅನ್ನುವಷ್ಟರಲ್ಲಿ ದಿಢೀರನೆ ಒಂದು ತಿರುವು. ಪ್ರೇಮಕತೆ ಎಂದ ಮೇಲೆ ಅಡ್ಡಿ ಇದ್ದಾಗ ತಾನೇ ಕುತೂಹಲ ಉಳಿಯುವುದು. ಯಾವ ರೀತಿಯ ಅಡ್ಡಿ? ಎಲ್ಲ ಅಡ್ಡಿ ಆತಂಕಗಳನ್ನು ಮೀರಿ ನಾಯಕ ನಾಯಕಿ ಒಂದಾಗುತ್ತಾರಾ ಎನ್ನುವುದೇ ‘ಸಾಮಜವರಗಮನ’ದ ತಿರುಳು.

ಇದೊಂದು ಪಕ್ಕಾ ಫ್ಯಾಮಿಲಿ ಎಂಟರ್‌ಟೇನರ್‌. ಮೊದಲನೇ ದೃಶ್ಯದಿಂದಲೇ ಭರಪೂರ ಹಾಸ್ಯ ತುಂಬಿರುವ ಕಥೆ. ಮಜವಾಗಿ ನೋಡಿಸಿಕೊಂಡು ಹೋಗುತ್ತದೆ. ಆದರೆ ಈ ಮಜಾ ಮೊದಲಾರ್ಧ ಮಾತ್ರ. ಎರಡನೇ ಅರ್ಧದಲ್ಲಿ ಕಥೆಯ ವೇಗ ಸ್ವಲ್ಪ ಬದಲಾಗುತ್ತದೆ ಮತ್ತು ಮೊದಲನೇ ಅರ್ಧದಲ್ಲಿ ಇದ್ದ ಮೊನಚು ಸ್ವಲ್ಪ ಮಟ್ಟಿಗೆ ಕಳೆದುಕೊಳ್ಳುತ್ತದೆ. ಆದರೂ ಈ ಸಿನಿಮಾದಲ್ಲಿ ಇರುವ ಒಂದು ಆಸಕ್ತಿಕರ ತಿರುವು ಇವೆಲ್ಲ ಕೊರತೆಯನ್ನು ಮುಚ್ಚುತ್ತದೆ. ಈ ತಿರುವೇ ಇದರ ಜೀವಾಳ. ಇಲ್ಲವಾದಲ್ಲಿ ಮಿಕ್ಕೆಲ್ಲ ಪ್ರೇಮಕತೆಗಳಂತೆ ಹತ್ತರಲ್ಲಿ ಹನ್ನೊಂದು ಆಗಿಬಿಡುವ ಅಪಾಯವಿತ್ತು. ನಿರ್ದೇಶಕರು ಜಾಣ್ಮೆಯಿಂದ ಅದನ್ನು ನಿಭಾಯಿಸಿದ್ದಾರೆ.

‘ಸಾಮಜವರಗಮನ’ ಗೆಲ್ಲುವುದು ಎಲ್ಲಿ ಎಂದು ನೋಡುತ್ತಾ ಹೋದರೆ ಒಂದಷ್ಟು ಅಂಶಗಳು ಎದ್ದು ಕಾಣುತ್ತದೆ. ಮೊದಲಿಗೆ ಕಾಣುವುದು ನಿರ್ದೇಶಕ ರಾಮ್ ಅಬ್ಬರಾಜು ಕಟ್ಟಿಕೊಟ್ಟ ಮೊದಲನೇ ಅರ್ಧದ ಲವಲವಿಕೆಯ ನಿರೂಪಣೆ. ಮನಸಾರೆ ನಕ್ಕು ಆನಂದಿಸಬಲ್ಲ ಹಾಸ್ಯ ಅದು. ಇನ್ನು ಎರಡನೆಯ ಆಕರ್ಷಣೆ ಅಂದರೆ ನಾಯಕ ಶ್ರೀ ವಿಷ್ಣು ಅಭಿನಯ. ಮಧ್ಯಮವರ್ಗದ ಯುವಕನ ಪಾತ್ರಕ್ಕೆ ಹೇಳಿ ಮಾಡಿಸಿದಂತಹ ನಟ ಶ್ರೀ ವಿಷ್ಣು. ಇಲ್ಲೂ ಅವರ ಚುರುಕು ಮತ್ತು ಲವಲವಿಕೆಯ ಅಭಿನಯದಿಂದ ಬಾಲು ಪಾತ್ರಕ್ಕೆ ಜೀವ ತುಂಬಿ ಮನಸ್ಸು ಗೆಲ್ಲುತ್ತಾರೆ. ಅವರ ಹಾಸ್ಯದ ಟೈಮಿಂಗ್ ಕೂಡ ಬಹಳ ಅಚ್ಚುಕಟ್ಟು.

ಅದಕ್ಕೆ ಪೂರಕ ಎಂಬಂತೆ ನಾಯಕಿ ರೇಬಾ ಮೋನಿಕಾರ ಅಭಿನಯ ಕೂಡ ಮನಸ್ಸನ್ನು ಗೆಲ್ಲುತ್ತದೆ. ಸಾಮಾನ್ಯವಾಗಿ ಇಂಥ ಚಿತ್ರಗಳಲ್ಲಿ ನಾಯಕಿಯ ಪಾತ್ರವನ್ನು ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತೆ ಮಾಡಿಬಿಡುತ್ತಾರೆ ಆದರೆ ಈ ಚಿತ್ರದಲ್ಲಿ ಹಾಗಾಗಿಲ್ಲ. ತಮಗೆ ಸಿಕ್ಕಿರುವ ಅವಕಾಶವನ್ನು ನಾಯಕಿ ರೇಬಾ ಸಂಪೂರ್ಣ ಉಪಯೋಗಿಸಿಕೊಂಡು ಬಹಳ ಒಳ್ಳೆಯ ಅಭಿನಯ ನೀಡಿದ್ದಾರೆ. ಈಕೆ ಒಳ್ಳೆಯ ನೃತ್ಯಪಟು ಎನ್ನುವುದು ಕೂಡ ಈ ಚಿತ್ರದ ಮೂಲಕ ತಿಳಿಯುತ್ತದೆ.

ಆದರೆ ಈ ಚಿತ್ರದ ನಿಜವಾದ ಹೀರೋ ಎಂದರೆ ನಾಯಕನ ಅಪ್ಪ ಉಮಾ ಮಹೇಶ್ವರ. ನರೇಶ್ ಅವರ ಅಭಿನಯ ಅಂತೂ ಅಮೋಘ. ಪದವಿ ಮುಗಿಸಲು ಹರಸಾಹಸ ಪಡುವ ಹಿರಿಯ ವಿದ್ಯಾರ್ಥಿಯ ಪಾತ್ರದಲ್ಲಿ ನರೇಶ್ ಅವರ ಅಭಿನಯ ನೋಡುಗರಲ್ಲಿ ನಗು ಉಕ್ಕಿಸಿ ಹೊಟ್ಟೆ ಹುಣ್ಣಾಗಿಸುತ್ತದೆ. ಅವರ ವಸ್ತ್ರವಿನ್ಯಾಸ ಇರಬಹುದು ಅವರ ಆಂಗಿಕ ಅಭಿನಯ ಇರಬಹುದು, ಅವರ ಭಾವಾಭಿನಯ ಇರಬಹುದು ಎಲ್ಲವೂ ಶುದ್ಧ ಮನರಂಜನೆ. ಎರಡನೇ ಅರ್ಧದಲ್ಲಿ ಸಿನಿಮಾ ಸ್ವಲ್ಪ ಬೋರ್ ಹೊಡೆದರೂ ನೋಡಿಸಿಕೊಂಡು ಹೋಗಿರುವುದು ವೆನ್ನೇಲ ಕಿಶೋರ್ ಅವರ ಅಭಿನಯ. ಅವರಿಗೆ ಸಿಕ್ಕ ಪಾತ್ರ ಚಿಕ್ಕದಾದರೂ ಮಜವಾಗಿದೆ. ಇನ್ನು ಶ್ರೀಕಾಂತ್ ಅಯ್ಯಂಗಾರ್ ಅಭಿನಯ ಕೂಡ ಪರವಾಗಿಲ್ಲ.

ಚುರುಕು ಮತ್ತು ಲವಲವಿಕೆಯ ಸಂಭಾಷಣೆ ಈ ಚಿತ್ರದ ಹೈಲೈಟ್. ಚಿತ್ರದ ಮುಖ್ಯ ಹಿನ್ನಡೆ ಎಂದರೆ ದ್ವಿತಿಯಾರ್ಧದ ಚಿತ್ರಕಥೆ. ಇನ್ನೊಂದು ಚೂರು ಬಿಗಿಯಾಗಿದ್ದಿದ್ದರೆ ಇನ್ನೂ ಉತ್ತಮವಾಗಿರುತ್ತಿತ್ತು. ಕೆಲವು ಪಾತ್ರಗಳನ್ನು ಇನ್ನೂ ಉತ್ತಮವಾಗಿ ಬೆಳೆಸಿ ಬಳಸಿಕೊಳ್ಳಬಹುದಿತ್ತು ಎಂದೂ ಅನಿಸುತ್ತದೆ. ನಿರ್ದೇಶಕರು ಇದನ್ನು ಕೌಟುಂಬಿಕ ಮನರಂಜನೆ ಮಾಡಲು ಹೋಗಿ ಹಾಸ್ಯಕ್ಕೆ ಮಾತ್ರ ಬಹಳ ಒತ್ತುಕೊಟ್ಟು ಭಾವನಾತ್ಮಕ ದೃಶ್ಯಗಳನ್ನು ಕಡೆಗಣಿಸಿದ್ದಾರೆ ಎನಿಸುತ್ತದೆ. ಹಾಗಾಗಿಯೇ ಚಿತ್ರದ ಅಂತ್ಯ ಸ್ವಲ್ಪ ಅಸಹಜ ಎನ್ನುವ ಭಾವನೆ ಬರುತ್ತದೆ. ಇನ್ನಷ್ಟು ಗಮನವಹಿಸಿ ಭಾವನಾತ್ಮಕ ದೃಶ್ಯಗಳನ್ನು ಹೆಣೆದಿದ್ದರೆ ಒಂದು ಸಂಪೂರ್ಣ ಅನುಭವ ದೊರಕಿದಂತೆ ಆಗಿರುತ್ತಿತ್ತು. ಹಾಡುಗಳು ಕೂಡ ಚಿತ್ರಕ್ಕೆ ಅಷ್ಟೇನೂ ಪೂರಕವಾಗಿರದೆ ಪರಿಣಾಮ ಬೀರುವುದಿಲ್ಲ.

ರಾಮ್ ರೆಡ್ಡಿಯವರ ಛಾಯಾಗ್ರಹಣ ಮತ್ತು ಗೋಪಿ ಸುಂದರ್ ಅವರ ಹಿನ್ನೆಲೆ ಸಂಗೀತ ಬಹಳ ಉತ್ತಮವಾಗಿದೆ. ಎರಡನೇ ಅರ್ಧದಲ್ಲಿ ಸಂಕಲನ ಸ್ವಲ್ಪ ಚುರುಕಾಗಿದ್ದಿದ್ದರೆ ಮತ್ತೂ ಉತ್ತಮ ಅನುಭವ ನೀಡುತ್ತಿತ್ತು. ಇಂಥ ಕೆಲವು ಚಿಕ್ಕಪುಟ್ಟ ಕೊರತೆಗಳನ್ನು ಪಕ್ಕಕ್ಕಿಟ್ಟು ನೋಡಿದರೆ ‘ಸಾಮಜವರಗಮನ’ ಬಹಳ ಉತ್ತಮ ಕೌಟುಂಬಿಕ ಮನರಂಜನೆಯ ಚಿತ್ರ. ಕುಟುಂಬದ ಸಮೇತ ನೋಡಿ ನಕ್ಕು ಹಗುರಾಗಬಲ್ಲ ಚಿತ್ರ. ‘ಸಾಮಜವರಗಮನ’ ahaದಲ್ಲಿ stream ಆಗುತ್ತಿದೆ.

LEAVE A REPLY

Connect with

Please enter your comment!
Please enter your name here