ನೈಜ ಘಟನೆಯನ್ನು ಆಧರಿಸಿ ಬರುತ್ತಿರುವ ಸಿನಿಮಾಗಳ ಪೈಕಿ ‘ದಿ ಸಾಬರಮತಿ ರಿಪೋರ್ಟ್​’ ಸಹ ಒಂದು. ಗೋಧ್ರಾ ಹತ್ಯಾಕಾಂಡದ ಕಥೆಯನ್ನು ತೆರೆದಿಡಲಿರುವ ಚಿತ್ರದಲ್ಲಿ ವಿಕ್ರಾಂತ್‌ ಮೆಸ್ಸಿ ಹಿಂದಿ ಪತ್ರಕರ್ತನಾಗಿ ಕಾಣಿಸಿಕೊಂಡಿದ್ದಾರೆ.

’12th Fail’ ಸಿನಿಮಾದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ನಟ ವಿಕ್ರಾಂತ್‌ ಮೆಸ್ಸಿ ಈಗ ಮತ್ತೊಂದು ಸಿನಿಮಾದ ಜೊತೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ‘The Sabarmati Report’ ನೈಜ ಘಟನೆಯಾಧಾರಿತ ಸಿನಿಮಾ. 22 ವರ್ಷಗಳ ಹಿಂದಿನ ಗೋಧ್ರಾ ರೈಲು ಹತ್ಯಾಕಾಂಡ ಘಟನೆಯ ಕಥೆಯನ್ನೇ ಸಿನಿಮಾದ ಮೂಲಕ ತೋರಿಸುವ ಪ್ರಯತ್ನಕ್ಕೆ ನಿರ್ದೇಶಕ ರಂಜನ್‌ ಚಂದೇಲ್‌ ಮುಂದಾಗಿದ್ದಾರೆ. 2002ರ ಫೆಬ್ರವರಿ 27ರಂದು ನಡೆದ ಗೋಧ್ರಾ ರೈಲು ದುರಂತದಲ್ಲಿ 59 ಮಂದಿ ಹಿಂದೂ ಯಾತ್ರಿಗಳ ಸಜೀವ ದಹನ ಆಗಿತ್ತು. ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ಈ ಸಿನಿಮಾ ಮಾಡಲಾಗಿದೆ ಎಂದು ಈ ಹಿಂದೆ ರಿಲೀಸ್‌ ಮಾಡಲಾಗಿದ್ದ ಚಿತ್ರದ ಟೀಸರ್​ನಲ್ಲಿ ತಿಳಿಸಲಾಗಿತ್ತು.

‘ಬಾಲಾಜಿ ಮೋಷನ್​ ಪಿಕ್ಚರ್ಸ್​’ ಹಾಗೂ ‘ಎ ವಿಕಿರ್​ ಫಿಲ್ಮ್ಸ್​ ಪ್ರೊಡಕ್ಷನ್’ ಜಂಟಿಯಾಗಿ ನಿರ್ಮಿಸಿರುವ ಈ ಸಿನಿಮಾದಲ್ಲಿ ವಿಕ್ರಾಂತ್‌ ಮೆಸ್ಸಿ ಹಿಂದಿ ಪತ್ರಕರ್ತನಾಗಿ ಕಾಣಿಸಿಕೊಂಡಿದ್ದಾರೆ. ನಡೆದ ಘಟನೆಯನ್ನು ಜನರ ಮುಂದೆ ಇಡುವ ಪತ್ರಕರ್ತನಾಗಿ ಮೆಸ್ಸಿ ಅಭಿನಯ ಸಿನಿಪ್ರಿಯರನ್ನು ಆಕರ್ಷಿಸುತ್ತದೆ. ಈಗಾಗಲೇ ಟೀಸರ್‌ನಿಂದ ಸದ್ದು ಮಾಡಿದ್ದ ಚಿತ್ರತಂಡ ಈಗ ರಿಲೀಸ್‌ ದಿನಾಂಕ ಪ್ರಕಟಿಸಿದೆ. ಆಗಸ್ಟ್‌ 2ರಂದು ಸಿನಿಮಾ ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ.

ಗೋಧ್ರಾ ಹತ್ಯಾಕಾಂಡ ನಡೆದ ನಂತರ ಈ ಘಟನೆ ಸುತ್ತ ಸಾಕಷ್ಟು ವಿವಾದಗಳು ಸುತ್ತುಕೊಂಡಿವೆ. ವಿವಾದಾತ್ಮಕ ವಸ್ತುವಿಷಯ ಇರುವುದರಿಂದ ಈ ಸಿನಿಮಾ ಕುರಿತಾಗಿ ಜನರಲ್ಲಿ ಒಂದು ರೀತಿಯ ಕುತೂಹಲ ಮನೆ ಮಾಡಿದೆ. ಸಿನಿಮಾದಲ್ಲಿ ನಟ ವಿಕ್ರಾಂತ್​ ಮೆಸ್ಸಿ ಜೊತೆಗೆ ರಾಶಿ ಖನ್ನಾ, ರಿಧಿ ಡೋಗ್ರಾ ಕೂಡ ನಟಿಸಿದ್ದಾರೆ. ಈ ಹಿಂದೆ ಈ ಚಿತ್ರವನ್ನ ಮೇ 3ರಂದು ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿತ್ತು. ಆದರೆ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಿಲೀಸ್‌ ದಿನಾಂಕವನ್ನು ಬದಲಿಸಲಾಯಿತು.

LEAVE A REPLY

Connect with

Please enter your comment!
Please enter your name here