ನಿತೀಶ್‌ ತಿವಾರಿ ನಿರ್ದೇಶನದಲ್ಲಿ ಸೆಟ್ಟೇರಲಿರುವ ‘ರಾಮಾಯಣ’ ಐತಿಹಾಸಿಕ ಚಿತ್ರದಲ್ಲಿ ಯಶ್‌ ರಾವಣನ ಪಾತ್ರ ಮಾಡಲಿದ್ದಾರೆ ಎನ್ನುವ ವದಂತಿಗೆ ಇಂಬು ಸಿಕ್ಕಿದೆ. ನಿನ್ನೆ ನಂಜನಗೂಡಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯಶ್‌ ಈ ಸುದ್ದಿಯನ್ನು ಅಲ್ಲಗಳೆದಿಲ್ಲ. ‘ನಾನೆಲ್ಲೂ ಹೋಗಿಲ್ಲ. ಎಲ್ಲವೂ ಸದ್ಯದಲ್ಲೇ ತಿಳಿಯಲಿದೆ’ ಎಂದಿದ್ದಾರೆ.

‘ಆದಿಪುರುಷ್‌’ ಸಿನಿಮಾ ವಿವಾದದ ಹೊತ್ತಿನಲ್ಲಿ ಮತ್ತೊಂದು ರಾಮಾಯಣ ಸಿನಿಮಾ ಬಗ್ಗೆ ಚರ್ಚೆಯಾಗುತ್ತಿದೆ. ಬಾಲಿವುಡ್‌ನ ಖ್ಯಾತ ಚಿತ್ರನಿರ್ದೇಶಕ ನಿತೀಶ್‌ ತಿವಾರಿ ಸಾರಥ್ಯದ ರಾಮಾಯಣ ಸಿನಿಮಾ ಈಗ ಸುದ್ದಿಯಲ್ಲಿದೆ. ಹಿಂದೆಂದೂ ಕಂಡರಿಯದ ದೊಡ್ಡ ಕ್ಯಾನ್ವಾಸ್‌ನಲ್ಲಿ ಅವರು ರಾಮಾಯಣ ಮಾಡುವ ತಯಾರಿ ನಡೆಸಿದ್ದಾರೆ. ಈ ಚಿತ್ರದಲ್ಲಿ ರಣಬೀರ್‌ ಕಪೂರ್‌ ಮತ್ತು ಅಲಿಯಾ ಭಟ್‌ ರಾಮ – ಸೀತೆಯಾಗಿ ನಟಿಸಿದರೆ, ಯಶ್‌ ಅವರು ರಾವಣನ ಪಾತ್ರ ನಿರ್ವಹಿಸಲಿದ್ದಾರೆ ಎನ್ನುವುದು ಸುದ್ದಿ. ಕಳೆದ ಕೆಲವು ದಿನಗಳಿಂದ ಚಾಲ್ತಿಯಲ್ಲಿರುವ ಈ ಸುದ್ದಿ ಇನ್ನೂ ಅಧಿಕೃತವಾಗಿಲ್ಲ.

ನಿನ್ನೆ ಯಶ್‌ – ರಾಧಿಕಾ ದಂಪತಿ ತಮ್ಮ ಮಕ್ಕಳೊಂದಿಗೆ ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿದ್ದರು. ಆಗ ಮಾಧ್ಯಮಗಳೊಂದಿಗೆ ಯಶ್‌ ಮಾತನಾಡಿದ್ದಾರೆ. ನೂತನ ಸಿನಿಮಾ ಬಗ್ಗೆ ಪ್ರಶ್ನಿಸಿದಾಗ ಯಶ್‌, ‘KGF ಸರಣಿ ಸಿನಿಮಾಗಳ ದೊಡ್ಡ ಯಶಸ್ಸಿನ ನಂತರ ನನ್ನ ಮೇಲೆ ದೊಡ್ಡ ಜವಾಬ್ದಾರಿ ಇದೆ. ಹಣ ತೆತ್ತು ಸಿನಿಮಾ ವೀಕ್ಷಿಸುವ ಜನರಿಗೆ ನಾನು ಅವರು ಇಷ್ಟಪಡುವಂಥ ಸಿನಿಮಾ ನೀಡಬೇಕು. ಹಾಗಾಗಿ ದೊಡ್ಡ ತಯಾರಿ ನಡೆಯುತ್ತಿದೆ. ನಾನೆಲ್ಲೂ ಹೋಗಿಲ್ಲ. ವದಂತಿಗಳಿಗೆ ತಲೆ ಕೆಡಿಸಿಕೊಳ್ಳಬೇಡಿ. ಸದ್ಯದಲ್ಲೇ ನೂತನ ಸಿನಿಮಾ ಬಗ್ಗೆ ಮಾಹಿತಿ ಸಿಗಲಿದೆ’ ಎಂದಿದ್ದಾರೆ.

ನಿತೀಶ್‌ ತಿವಾರಿ ಮತ್ತು ರವಿ ಉದ್ಯಾವರ್‌ ನಿರ್ದೇಶಿಸಲಿರುವ ‘ರಾಮಾಯಣ’ ಭಾರತೀಯ ಸಿನಿಮಾ ಇತಿಹಾಸದಲ್ಲೇ ಒಂದು ಮೈಲುಗಲ್ಲಾಗಲಿದೆ ಎನ್ನಲಾಗುತ್ತಿದೆ. ಭಾರತೀಯ ಸಿನಿಮಾದ ಶ್ರೇಷ್ಠ ತಂತ್ರಜ್ಞರು, ದೊಡ್ಡ ತಾರಾಬಳಗ, ಅದ್ಧೂರಿ ಸೆಟ್‌ಗಳ ಮೂಲಕ ಹಿಂದೆಂದೂ ಕಾಣದಂಥ ದೊಡ್ಡ ಸಿನಿಮಾ ಮಾಡುವ ಯೋಜನೆ ರೂಪುಗೊಳ್ಳುತ್ತಿದೆ. ಡಿಸೆಂಬರ್‌ನಲ್ಲಿ ಸೆಟ್ಟೇರಲಿರುವ ಚಿತ್ರದಲ್ಲಿ ರಾಮ ಮತ್ತು ಸೀತೆಯಾಗಿ ರಣಬೀರ್‌ ಕಪೂರ್‌ – ಅಲಿಯಾ ಭಟ್‌ ನಟಿಸುತ್ತಿದ್ದು, ರಾವಣನ ಪಾತ್ರದಲ್ಲಿ ಯಶ್‌ ಇರಲಿದ್ದಾರೆ ಎನ್ನುವುದು ಪ್ರಾಥಮಿಕ ಮಾಹಿತಿ. ಅಲ್ಲು ಅರವಿಂದ್‌, ಮಧು ಮಂಟೇನಾ, ನಮಿತ್‌ ಮಲ್ಹೋತ್ರಾ ನಿರ್ಮಿಸಲಿರುವ ಈ ಬಹುಭಾಷಾ ಸಿನಿಮಾದ ದೊಡ್ಡ ಯೋಜನೆಯ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ.

Previous article‘Online ಮದುವೆ, Offline ಶೋಭನ’ | ಕಾಮಿಡಿ ಕಿಲಾಡಿಗಳ ಸಿನಿಮಾ
Next articleಪವನ್‌ ಕುಮಾರ್‌ ‘ಧೂಮಂ’ ನಾಳೆ ತೆರೆಗೆ | 150ಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ ಕನ್ನಡ ಅವತರಣಿಕೆ

LEAVE A REPLY

Connect with

Please enter your comment!
Please enter your name here