ಯುವ ರಾಜಕುಮಾರ್‌ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿರುವ ಚಿತ್ರವಿದು. ಕೌಟುಂಬಿಕ ಪ್ರೇಕ್ಷಕರನ್ನೂ ಒಳಗೊಂಡು ಯುವ ಪೀಳಿಗೆಯನ್ನೂ ಸೆಳೆಯುವಂತಹ ಕತೆ ಬೇಕಿತ್ತು. ನಿರ್ದೇಶಕ ಸಂತೋಷ್‌ ಆನಂದರಾಮ್‌ ಜಾಣ್ಮೆಯಿಂದ ಚಿತ್ರಕಥೆ ಮಾಡಿದ್ದಾರೆ. ಹೀರೋಗೆ ಆಂಗ್ರಿ ಯಂಗ್‌ಮ್ಯಾನ್‌ ಇಮೇಜು ನೀಡುತ್ತಲೇ, ಕುಟುಂಬದ ಕತೆ ಹೇಳುತ್ತಾರೆ. ಪ್ರತಿಭಾವಂತ ಕಲಾವಿದರು ಹಾಗೂ ತಂತ್ರಜ್ಞರನ್ನು ಸೊಗಸಾಗಿ ದುಡಿಸಿಕೊಂಡಿದ್ದಾರೆ.

ವರನಟ ಡಾ ರಾಜ್‌ ಅವರ ಮೊಮ್ಮಗ ಯುವ ರಾಜಕುಮಾರ್‌ ಬೆಳ್ಳಿತೆರೆಗೆ ಪರಿಚಯವಾಗುತ್ತಿದ್ದಾರೆ ಎಂದಾಗಲೇ ನಿರೀಕ್ಷೆ ದುಪ್ಪಟ್ಟಾಗಿತ್ತು. ‘ದೊಡ್ಮನೆ ಹುಡುಗ’ ಎಂದು, ದೊಡ್ಮನೆ ನಟರ ಅಭಿಮಾನಿಗಳು ಸಂಭ್ರಮದಿಂದ ಕಾಯುತ್ತಿದ್ದರು. ಸಹಜವಾಗಿಯೇ ಸಿನಿಮಾದ ಹೀರೋ ಯುವ, ನಿರ್ದೇಶಕ ಸಂತೋಷ್‌ ಆನಂದರಾಮ್‌, ಚಿತ್ರ ನಿರ್ಮಿಸಿರುವ ಹೊಂಬಾಳೆ ಫಿಲಂಸ್‌ ಮೇಲೆ ಒತ್ತಡವಿತ್ತು. ಇದೀಗ ಸಿನಿಮಾ ತೆರೆಕಂಡಿದೆ. ನಿರ್ದೇಶಕ ಸಂತೋಷ್‌ ಮತ್ತು ಹೀರೋ ಯುವ ರಾಜಕುಮಾರ್‌ ತಮ್ಮ ಮೇಲಿನ ನಿರೀಕ್ಷೆ, ಭರವಸೆ ಹುಸಿಯಾಗದಂತೆ ನೋಡಿಕೊಂಡಿದ್ದಾರೆ. ಸದಭಿರುಚಿಯ ಕತೆ ಮತ್ತು ಆಕರ್ಷಕ ಮೇಕಿಂಗ್‌ನೊಂದಿಗೆ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ನಿರ್ದೇಶಕ ಸಂತೋಷ್‌ ಆನಂದರಾಮ್‌ ತಮ್ಮ ಹಿಂದಿನ ಎರಡು ಸಿನಿಮಾಗಳ ಕತೆಯ ಮೂಲಧಾತು ತಂದೆ – ಮಗನ ಬಾಂಧವ್ಯ. ‘ಯುವ’ ಸಿನಿಮಾದಲ್ಲಿಯೂ ತಂದೆ – ಮಗನ ಕತೆಯೊಂದಿಗೆ ಚಿತ್ರಕಥೆ ಹೆಣೆದಿದ್ದಾರೆ. ಹಿಂದಿನ ಎರಡು ಸಿನಿಮಾಗಳಲ್ಲಿ ಇರುವಂತೆ ಇಲ್ಲಿ ಹೆಚ್ಚಿನ ಮೆಲೋಡ್ರಾಮಾ ಇಲ್ಲ. ಆ ಮಟ್ಟಿಗೆ ಚಿತ್ರಕಥೆ ಹೆಣಿಗೆಯಲ್ಲಿ ಕೊಂಚ ಭಿನ್ನತೆ ಕಾಯ್ದುಕೊಂಡಿದ್ದಾರೆ. ಅಪ್‌ಡೇಟ್‌ ಆಗಿರುವ ಪ್ರೇಕ್ಷಕರ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆ. ಚಿತ್ರದ ಮೊದಲಾರ್ಧ ‘ಯುವ’ನ ಇಮೇಜು ಸೃಷ್ಟಿಸುವುದಕ್ಕೆ ಮೀಸಲಾಗಿದೆ. ಅಲ್ಲಿ ಹೊಡೆದಾಟ ಹೆಚ್ಚಾಯ್ತು ಎಂದು ಒಂದು ವರ್ಗದ ಪ್ರೇಕ್ಷಕರಿಗೆ ಅನ್ನಿಸಬಹುದು. ಕತೆಯ ನೈಜ ಹರವು ಕಾಣಿಸುವುದು ದ್ವಿತಿಯಾರ್ಧದಲ್ಲಿ. ಇಂಟರ್‌ವೆಲ್‌ ನಂತರದ ಸದೃಢ ದೃಶ್ಯಗಳು ಮೊದಲಾರ್ಧದ ಚಿತ್ರಕಥೆಗೆ ಸಮರ್ಥನೆ ನೀಡುತ್ತವೆ.

ಯುವ ರಾಜಕುಮಾರ್‌ ಅವರನ್ನು ಬೆಳ್ಳಿತೆರೆಗೆ ಪರಿಚಯಿಸುತ್ತಿರುವ ಚಿತ್ರವಿದು. ಕೌಟುಂಬಿಕ ಪ್ರೇಕ್ಷಕರನ್ನೂ ಒಳಗೊಂಡು ಯುವ ಪೀಳಿಗೆಯನ್ನೂ ಸೆಳೆಯುವಂತಹ ಕತೆ ಬೇಕಿತ್ತು. ನಿರ್ದೇಶಕ ಸಂತೋಷ್‌ ಆನಂದರಾಮ್‌ ಜಾಣ್ಮೆಯಿಂದ ಚಿತ್ರಕಥೆ ಮಾಡಿದ್ದಾರೆ. ಹೀರೋಗೆ ಆಂಗ್ರಿ ಯಂಗ್‌ಮ್ಯಾನ್‌ ಇಮೇಜು ನೀಡುತ್ತಲೇ, ಕುಟುಂಬದ ಕತೆ ಹೇಳುತ್ತಾರೆ. ಫ್ಲಾಶ್‌ಬ್ಯಾಕ್‌ನಲ್ಲಿ ಶುರುವಾಗುವ ಕುಸ್ತಿ ಕಲೆಯನ್ನು ಕ್ಲೈಮ್ಯಾಕ್ಸ್‌ನಲ್ಲಿ ಕುಟುಂಬದ ಕತೆಯೊಂದಿಗೆ ಬೆಸೆಯುತ್ತಾರೆ. ಈ ಬೆಸುಗೆ ಚಿತ್ರಕಥೆಯಲ್ಲಿ ಹಾಸುಹೊಕ್ಕಾಗಿದೆ ಎನ್ನುವುದು ವಿಶೇಷ. ಸಿನಿಮಾ ಮುಗಿಯುವ ಕೊನೆಯ ಕ್ಷಣದಲ್ಲೂ ಪ್ರೇಕ್ಷಕರು ಕುತೂಹಲದಿಂದ ಪರದೆಯತ್ತ ನೋಡುತ್ತಿರುತ್ತಾರೆ. ಅದು ನಿರ್ದೇಶಕನ ಗೆಲುವು.

ಯುವ ಅವರು ಸಾಕಷ್ಟು ತಯಾರಿಯೊಂದಿಗೆ ಕ್ಯಾಮೆರಾ ಎದುರಿಸಿದ್ದಾರೆ ಎನ್ನುವುದು ಹಲವು ಸನ್ನಿವೇಶಗಳಲ್ಲಿ ಮನವರಿಕೆಯಾಗುತ್ತದೆ. ಆಂಗ್ರಿ ಯಂಗ್‌ಮ್ಯಾನ್‌ ಲುಕ್‌ ಕೊಡುವ ಅವರು ಭಾವನಾತ್ಮಕ ಸನ್ನಿವೇಶಗಳಲ್ಲೂ ಸ್ಕೋರ್‌ ಮಾಡುತ್ತಾರೆ. ನೃತ್ಯ ಮತ್ತು ಹೊಡೆದಾಟದಲ್ಲಿ ಸಾಕಷ್ಟು ಪರಿಣತಿ ಪಡೆದಿದ್ದಾರೆ ಎನ್ನುವುದು ಅವರ ‘ಪಟ್ಟು’ಗಳಿಂದ ತಿಳಿದುಬರುತ್ತದೆ. ಚಿತ್ರದ ಸನ್ನಿವೇಶಗಳು ಅಂದಗಾಣುವಲ್ಲಿ ಅನುಭವಿ ಕಲಾವಿದರಾದ ಅಚ್ಯುತ್‌ ಕುಮಾರ್‌, ಕಿಶೋರ್‌, ಗೋಪಾಲ ದೇಶಪಾಂಡೆ, ಸುಧಾರಾಣಿ ಅವರ ಉಪಸ್ಥಿತಿ ವರವಾಗಿದೆ. ನಿರ್ದೇಶಕರಿಗೆ ಛಾಯಾಗ್ರಾಹಣ, ನೃತ್ಯ ಸಂಯೋಜನೆ, ಸ್ಟಂಟ್‌ ಕೊರಿಯೋಗ್ರಫಿ, ಕಲಾ ನಿರ್ದೇಶನ, ಸಂಗೀತ ವಿಭಾಗದಲ್ಲಿ ಉತ್ತಮ ನೆರವು ಸಿಕ್ಕಿದೆ. ಪ್ರೇಕ್ಷಕರ ನಿರೀಕ್ಷೆಯಲ್ಲಿರುವ ಸಿಂಗಲ್‌ಸ್ಕ್ರೀನ್‌ ಥಿಯೇಟರ್‌ಗಳಿಗೆ ‘ಯುವ’ ಒಂದಷ್ಟು ಬಲ ತುಂಬುವ ಸಾಧ್ಯತೆಗಳು ದಟ್ಟವಾಗಿ ಕಾಣಿಸುತ್ತವೆ.

ಕೊನೆಯ ಮಾತು | ವರನಟ ಡಾ ರಾಜಕುಮಾರ್‌ ತಮ್ಮ ಸಿನಿಮಾಗಳಲ್ಲಿ ಕುಡಿತ, ಧೂಮಪಾನದ ದೃಶ್ಯಗಳನ್ನು ಪ್ರಜ್ಞಾಪೂರ್ವಕವಾಗಿ ದೂರವಿಡುತ್ತಿದ್ದರು. ಪುನೀತ್‌ ರಾಜಕುಮಾರ್‌ ಅವರದ್ದು ಕೂಡ ಬಹುತೇಕ ಇದೇ ಮಾದರಿ. ‘ಅಪ್ಪು’ವನ್ನು ಪ್ರಸ್ತಾಪಿಸುವ ‘ಯುವ’ ಚಿತ್ರದಲ್ಲಿ ಮದ್ಯಪಾನ, ಧೂಮಪಾನದ ಬಹಳಷ್ಟು ಸನ್ನಿವೇಶಗಳಿವೆ. ಚಿತ್ರದುದ್ದಕ್ಕೂ ಹೀರೋ ಸೇರಿದಂತೆ ಬಹುತೇಕ ಪಾತ್ರಗಳ ಕೈಲಿ ಸಿಗರೇಟು, ಮದ್ಯದ ಗ್ಲಾಸುಗಳನ್ನು ನೋಡಬಹುದು. ಚಿಕ್ಕಮಕ್ಕಳಾದಿಯಾಗಿ ಕುಟುಂಬದ ಎಲ್ಲರೂ ಕುಳಿತು ವೀಕ್ಷಿಸುವ ಸಿನಿಮಾದಲ್ಲಿ ಇಂತಹ ದೃಶ್ಯಗಳು ಕೊಂಚ ಕಸಿವಿಸಿ ಉಂಟುಮಾಡುತ್ತವೆ. ಇವನ್ನು ತೋರಿಸದೆಯೂ ನಿರ್ದೇಶಕರು ಕತೆ ಹೇಳಬಹುದಿತ್ತು. ಈ ವಿಚಾರದಲ್ಲಿ ನಿರ್ದೇಶಕರು ಮತ್ತು ಹೀರೋ ಯುವ ‘ರಾಜ್‌ ಮಾದರಿ’ ಅನುಸರಿಸಿದ್ದಿದ್ದರೆ ಸಿನಿಮಾದ ತೂಕ ಹೆಚ್ಚುತ್ತಿತ್ತು.

LEAVE A REPLY

Connect with

Please enter your comment!
Please enter your name here