ಬಿಹಾರದ ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕೀಯ ಮುತ್ಸದ್ದಿ ಲಾಲೂ ಪ್ರಸಾದ್‌ ಯಾದವ್‌ ಅವರ ಬಯೋಪಿಕ್‌ ಹಿಂದಿ ಸಿನಿಮಾ ತಯಾರಾಗಲಿದೆ. ಬಾಲಿವುಡ್‌ ನಿರ್ದೇಶಕ – ನಿರ್ಮಾಪಕ ಪ್ರಕಾಶ್‌ ಝಾ ಚಿತ್ರ ನಿರ್ಮಿಸಲಿದ್ದು, ಕಲಾವಿದರು ಹಾಗೂ ತಂತ್ರಜ್ಞರ ಮಾಹಿತಿ ಸದ್ಯದಲ್ಲೇ ಹೊರಬೀಳಲಿದೆ.

ಭಾರತೀಯ ರಾಜಕಾರಣ ಕಂಡ ವರ್ಣರಂಜಿತ ರಾಜಕಾರಣಿ ಲಾಲೂ ಪ್ರಸಾದ್ ಯಾದವ್ ಅವರ ಜೀವನ ತೆರೆಗೆ ಬರಲು ಸಿದ್ದವಾಗುತ್ತಿದೆ. ರಾಜಕೀಯ ಹಾಗೂ ವೈಯಕ್ತಿಕ ಜೀವನದಲ್ಲಿ ಹಲವು ಏರಿಳಿತಗಳನ್ನು ಕಂಡ, ಹಾಸ್ಯ ಪೃವೃತ್ತಿಯ ಚತುರ ರಾಜಕಾರಣಿಯೂ ಆಗಿರುವ ಲಾಲೂ ಪ್ರಸಾದ್ ಯಾದವ್ ಅವರ ಜೀವನ, ರಾಜಕೀಯದ ಪ್ರಮುಖ ಘಟನೆಗಳನ್ನು ಆಧರಿಸಿ ಸಿನಿಮಾ ತಯಾರಾಗುತ್ತಿದೆ. ಪ್ರಕಾಶ್ ಝಾ ಅವರ ನಿರ್ಮಾಣ ಸಂಸ್ಥೆಯು ಯಾದವ್ ಕುಟುಂಬದಿಂದ ಅಗತ್ಯ ಒಪ್ಪಿಗೆಗಳನ್ನು ಪಡೆದಿದ್ದು, ಚಿತ್ರಕತೆ ನೀಡಿ ಒಪ್ಪಿಗೆಯನ್ನು ಪಡೆದು ನಿರ್ಮಾಣ ಕಾರ್ಯ ಆರಂಭಿಸಿದೆ. ಲಾಲೂ ಪ್ರಸಾದ್ ಯಾದವ್​ರ ಪುತ್ರ ತೇಜಸ್ವಿ ಯಾದವ್ ಅವರೂ ಸಹ ಈ ಸಿನಿಮಾಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಲಾಲೂ ಪ್ರಸಾದ್ ಯಾದವ್ ಅವರದ್ದು ಸುದೀರ್ಘವಾದ ರಾಜಕೀಯ ಜೀವನ. 1973ರಲ್ಲಿ ವಿದ್ಯಾರ್ಥಿ ನಾಯಕನಾಗಿ ರಾಜಕೀಯ ಪ್ರವೇಶಿಸಿದ ಅವರು ತಮ್ಮ 29ನೇ ವಯಸ್ಸಿನಲ್ಲಿಯೇ ಸಂಸದರಾಗಿ ಚುನಾಯಿತರಾಗಿದ್ದರು. ಆ ಬಳಿಕ ಬಿಹಾರ ವಿಧಾನಸಭೆ ಪ್ರತಿಪಕ್ಷ ನಾಯಕ, ಬಿಹಾರ ಮುಖ್ಯ ಮಂತ್ರಿ, ಕೇಂದ್ರ ರೈಲ್ವೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜಕೀಯ ಜೀವನದಲ್ಲಿ ಹಲವು ಏರು-ಪೇರುಗಳನ್ನು ಸಹ ಅವರು ಕಂಡಿದ್ದು, ಮೇವು ಹಗರಣ, ರೈಲ್ವೆ ನೇಮಕಾತಿ ಮತ್ತು ಟೆಂಡರ್ ಹಗರಣ, ಅಕ್ರಮ ಆಸ್ತಿ ಗಳಿಕೆ ಇನ್ನೂ ಕೆಲವು ಹಗರಣಗಳಲ್ಲಿ ಇವರ ಹೆಸರು ಕೇಳಿ ಬಂದಿತ್ತು ಹಾಗೂ ಮೇವು ಹಗರಣದಲ್ಲಿ ಅವರಿಗೆ ಶಿಕ್ಷೆಯೂ ಆಗಿತ್ತು.

ಲಾಲು ಪ್ರಸಾದ್‌ ಯಾದವ್‌ ಅವರು ಜೂನ್ 1, 1973 ರಂದು ರಾಬ್ರಿ ದೇವಿ ಅವರನ್ನು ವಿವಾಹವಾದರು ಈ ದಂಪತಿಗೆ ಇಬ್ಬರು ಗಂಡು ಮತ್ತು ಏಳು ಜನ ಹೆಣ್ಣು ಮಕ್ಕಳಿದ್ದಾರೆ. ಮೇವು ಹಗರಣಕ್ಕೆ ಸಂಬಂಧಿಸಿದ ಭ್ರಷ್ಟಾಚಾರದ ಆರೋಪದಲ್ಲಿ ಲಾಲು ಪ್ರಸಾದ್ ಯಾದವ್ ಅವರನ್ನು ರಾಜೀನಾಮೆ ನೀಡುವಂತೆ
ಒತ್ತಾಯಿಸಲಾಯಿತು. ಇದರ ಕಾರಣ ಲಾಲು ಅವರ ಪತ್ನಿ ರಾಬ್ರಿ ದೇವಿ ಅವರು ಜುಲೈ 25, 1997 ರಂದು ಬಿಹಾರದ ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ 2005 ರವರೆಗೆ ಕಾರ್ಯ ನಿರ್ವಹಿಸಿದ್ದಾರೆ. ಬಿಹಾರದ ಮುಖ್ಯ ಮಂತ್ರಿಯಾದಮೇಲೆ ರಾಬ್ರಿ ದೇವಿ ಅವರು ರಾಷ್ಟ್ರೀಯ ಪರಿಹಾರ ನಿಧಿಗಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರೂ.10 ಕೋಟಿ ಚೆಕ್ ನೀಡಿದ್ದರು. ಇವರು ಬಿಹಾರದ ಮುಖ್ಯಮಂತ್ರಿಯಾಗಿ 3 ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಇಲ್ಲಿಯವರೆಗೆ ಈ ಹುದ್ದೆಯನ್ನು ಅಲಂಕರಿಸಿದ ಮೊದಲ ಮತ್ತು ಏಕೈಕ ಮಹಿಳೆ ಎಂಬ ಕೀರ್ತಿ ಅವರದು. ಇಷ್ಟೇ ಅಲ್ಲದೇ ಬಿಹಾರ ವಿಧಾನ ಪರಿಷತ್ತಿನ ಸದಸ್ಯೆ (MLC)ಯಾಗಿ ಮತ್ತು ಈ ಹಿಂದೆ ಬಿಹಾರ ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ಇವರ ಹಿರಿಯ ಪುತ್ರ ಪ್ರತಾಪ್‌ ಸಿಂಗ್‌ ಯಾದವ್‌ ಬಿಹಾರ ಸರ್ಕಾರದಲ್ಲಿ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆಯ ಕ್ಯಾಬಿನೆಟ್ ಸಚಿವರಾಗಿದ್ದಾರೆ. ದ್ವಿತೀಯ ಪುತ್ರ ತೇಜಸ್ವಿ ಯಾದವ್‌ ಪ್ರಸ್ತುತ ಬಿಹಾರದ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಗಿಯೂ ರಸ್ತೆ ನಿರ್ಮಾಣ ಮತ್ತು ಲೋಕೋಪಯೋಗಿ ಇಲಾಖೆ ಸಚಿವರಾಗಿ, ನಗರ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಅಭಿವೃದ್ಧಿ ಮತ್ತು ವಸತಿ ಹಾಗೂ ಬಿಹಾರ ಸರ್ಕಾರದಲ್ಲಿ ಗ್ರಾಮೀಣ ಕೆಲಸಗಳು ಮತ್ತು ಅಭಿವೃದ್ಧಿ ಸಚಿವರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಲಾಲೂ ಪ್ರಸಾದ್ ಯಾದವ್​ ಅವರ ಖಾಸಗಿ ಜೀವನದ ಬಗ್ಗೆ ಹೆಚ್ಚು ತಿಳಿಯದ ವಿಷಯಗಳನ್ನು ಈ ಸಿನಿಮಾದ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಇದಾಗಿರಲಿದೆ ಎಂದು ವರದಿ ಯಾಗಿದೆ. ಚಿತ್ರದ ಪಾತ್ರಧಾರಿಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಜಾರಿಯಲ್ಲಿದ್ದು, ಬಾಲಿವುಡ್​ನ ಕೆಲವು ಖ್ಯಾತ ನಟರ ಹೆಸರುಗಳು ಪಟ್ಟಿಮಾಡಲಾಗಿದೆ. ಶೀಘ್ರವೇ ನಟರನ್ನು ಅಂತಿಮಗೊಳಿಸಲಾಗುವುದು. ಈ ಚಿತ್ರದಲ್ಲಿ ಭೋಜ್‌ಪುರಿ ನಟ ಯಶ್ ಕುಮಾರ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದೂ ಸಹ ವರದಿಯಾಗಿದೆ.

LEAVE A REPLY

Connect with

Please enter your comment!
Please enter your name here