15ನೇ ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದ ‘ಜೀವಮಾನ ಸಾಧನೆ’ ಪ್ರಶಸ್ತಿಗೆ ಹಿರಿಯ ಚಿತ್ರನಿರ್ದೇಶಕ ಎಂ ಎಸ್‌ ಸತ್ಯು ಅವರನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಚಿತ್ರೋತ್ಸವದ ಕೊನೆಯ ದಿನವಾದ ಇಂದು (ಮಾರ್ಚ್‌ 7) ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಹಿರಿಯ ಚಿತ್ರನಿರ್ದೇಶಕ ಎಂ ಎಸ್‌ ಸತ್ಯು ಅವರಿಗೆ 15ನೇ Biffes ‘ಜೀವಮಾನ ಸಾಧನೆ’ ಗೌರವ ಸಲ್ಲುತ್ತಿದೆ. ಈ ಗೌರವಕ್ಕಾಗಿ ಚಿತ್ರೋತ್ಸವ ಸಮಿತಿ ಮೂರು ಹೆಸರುಗಳನ್ನು ಶಿಫಾರಸು ಮಾಡಿತ್ತು. ಮೂವರಲ್ಲಿ ಸತ್ಯು ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಚಿತ್ಸೋತ್ಸವ ಇಂದು (ಮಾರ್ಚ್‌ 7) ಮುಕ್ತಾಯಗೊಳ್ಳುತ್ತಿದ್ದು, ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ಎಂ ಎಸ್‌ ಸತ್ಯು | ಭಾರತೀಯ ಚಿತ್ರರಂಗದ ಮಹತ್ವದ ಚಿತ್ರಗಳಲ್ಲೊಂದು ಎಂದೇ ಪರಿಗಣಿಸಲ್ಪಡುವ ಪ್ರಯೋಗ ‘ಗರಂ ಹವಾ’. ಸತ್ಯು ನಿರ್ದೇಶನದ ಈ ಹಿಂದಿ ಸಿನಿಮಾ ರಾಷ್ಟ್ರೀಯ ಭಾವೈಕ್ಯತೆ ಪ್ರಶಸ್ತಿಗೆ (1974) ಪಾತ್ರವಾಗಿತ್ತು. ಮೂಲತಃ ರಂಗಭೂಮಿ ಹಿನ್ನೆಲೆಯ ಸತ್ಯು ಚಿತ್ರನಿರ್ದೇಶನ, ರಂಗಕಲಾನಿರ್ದೇಶನದಲ್ಲಿ ದೊಡ್ಡ ಹೆಸರು. ಎಂಟು ಸಿನಿಮಾ, ಐದು ಕಿರುಚಿತ್ರ ಮತ್ತು ಸಾಕ್ಷ್ಯಚಿತ್ರಗಳು, ನಾಲ್ಕು ಟೀವಿ ಸರಣಿ ಮತ್ತು ಟೆಲಿ ಫಿಲ್ಮ್‌ಗಳು ಹಾಗೂ ಹಲವಾರು ನಾಟಕಗಳನ್ನು ನಿರ್ದೇಶಿಸಿದ್ದಾರೆ. ಭಾರತದ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಪಲ್ಲಟಗಳು ಅವರ ಸಿನಿಮಾ ಮತ್ತು ನಾಟಕಗಳ ಕಥಾವಸ್ತು ಎನ್ನುವುದು ವಿಶೇಷ. ಸಮಾಜದ ಅಂಕುಡೊಂಕುಗಳಿಗೆ ಕನ್ನಡಿ ಹಿಡಿಯಲು ಸಿನಿಮಾ, ರಂಗಭೂಮಿ ಮತ್ತು ಕಿರುತೆರೆ ಮಾಧ್ಯಮಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಂಡವರು ಸತ್ಯು.

ಹಿಂದಿ ಸಿನಿಮಾ ‘ಗರಂ ಹವಾ’ ಸೇರಿದಂತೆ ಕನ್ನಡದಲ್ಲಿ ಅವರು ನಿರ್ದೇಶಿಸಿದ ‘ಕನ್ನೇಶ್ವರ ರಾಮ’, ‘ಚಿತೆಗೂ ಚಿಂತೆ’, ‘ಬರ’, ‘ಗಳಿಗೆ’, ‘ಇಜ್ಜೋಡು’ ಮಹತ್ವದ ಚಿತ್ರಗಳಾಗಿ ದಾಖಲಾಗಿವೆ. ಭಾರತೀಯ ಸಿನಿಮಾದ ಆರಂಭದ ಹೊಸ ಅಲೆಯ ಸಿನಿಮಾ ನಿರ್ದೇಶಕರ ಪಟ್ಟಿಯಲ್ಲಿ ಸತ್ಯು ಅವರ ಹೆಸರು ಪ್ರಮುಖವಾಗಿ ಪ್ರಸ್ತಾಪವಾಗುತ್ತದೆ. ಭಾರತೀಯ ರಂಗಭೂಮಿಯ ಅತ್ಯುತ್ತಮ ರಂಗ ವಿನ್ಯಾಸಕ ಮತ್ತು ರಂಗ ನಿರ್ದೇಶಕ. ‘ದರಾ ಶಿಕೋಹ್‌’ ಅವರ ಅತ್ಯಂತ ಜನಪ್ರಿಯ ನಾಟಕಗಳಲ್ಲೊಂದು. Indian People’s Theatre Association (IPTA) ನಲ್ಲಿ ಸಕ್ರಿಯರಾಗಿದ್ದ ಸತ್ಯು ಭಾರತೀಯ ರಂಗಭೂಮಿಗೆ ದಶಕಗಳ ಕಾಲ ದುಡಿದಿದ್ದಾರೆ. ಪದ್ಮಶ್ರೀ ಪುರಸ್ಕೃತ ಸತ್ಯು ಅವರಿಗೆ ಇದೀಗ 15ನೇ Biffes ಜೀವಮಾನ ಸಾಧನೆ ಗೌರವ ಸಲ್ಲುತ್ತಿದೆ.

LEAVE A REPLY

Connect with

Please enter your comment!
Please enter your name here