ಬಹಳ ಪರಿಣಾಮಕಾರಿಯಾದ ಬರವಣಿಗೆ ಮತ್ತು ದೃಶ್ಯಸಂಯೋಜನೆಯಿಂದ ಈ ಸರಣಿ ಬ್ರಿಟನ್‌ನ ಜನಪ್ರಿಯ ಮತ್ತು ಅತ್ಯುತ್ತಮ ಕ್ರೈಮ್ ಡ್ರಾಮಾಗಳ ಸಾಲಿಗೆ ಸೇರುತ್ತದೆ. ಬ್ರಿಟನ್ನಿನ ಕಪ್ಪುಜನಾಂಗ ಸಮುದಾಯದ ಗ್ಯಾಂಗ್‌ಸ್ಟರ್‌ ಜೀವನದ ಚಿತ್ರಣಗಳು, ಅದಕ್ಕೆ ಪೂರಕವಾದ ಸಂಗೀತ ಮತ್ತು ದೃಶ್ಯಸಂಯೋಜನೆ ಇವೆಲ್ಲವೂ ಬಹಳ ಪರಿಣಾಮಕಾರಿಯಾಗಿ ಈ ಸರಣಿಯಲ್ಲಿ ಚಿತ್ರಿತವಾಗಿದೆ. ಟಾಪ್ ಬಾಯ್ 3 Netflixನಲ್ಲಿ ಲಭ್ಯವಿದೆ.

ಜನಪ್ರಿಯ ಬ್ರಿಟನ್ ಕ್ರೈಮ್ ಡ್ರಾಮಾ ಸರಣಿ ‘ಟಾಪ್ ಬಾಯ್’ ತನ್ನ ಕೊನೆಯ ಸೀಸನ್ 3 ಅನ್ನು ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆ ಮಾಡಿದೆ. ಲಂಡನ್ ನಗರದ ಆಂತರಿಕ ಸತ್ಯಗಳ ದರ್ಶನ ಮಾಡಿಸುತ್ತಲೇ ಲಂಡನ್ ನಗರದ ಯುವಜನತೆ ಮಾತನಾಡುವ ಪರಿಯನ್ನು ಪರಿಚಯಿಸುತ್ತಾ 2011ರಲ್ಲಿ ಆರಂಭವಾದ ಈ ಸರಣಿ ತನ್ನ ದೃಶ್ಯ ವಿನ್ಯಾಸದಿಂದ ವೀಕ್ಷಕರ ಮನಸ್ಸನ್ನು ಗೆದ್ದಿತ್ತು. ಆದರೆ 2014ರಲ್ಲಿ ಅನಿರೀಕ್ಷಿತವಾಗಿ ಈ ಸರಣಿ ಸ್ಥಗಿತಗೊಂಡಿದ್ದು ಅಭಿಮಾನಿಗಳಲ್ಲಿ ಬೇಸರ ಮೂಡಿಸಿತ್ತು. ಆದರೆ ನಂತರದ ದಿನಗಳಲ್ಲಿ ಆಶ್ಲೇ ವಾಲ್ಟರ್ಸ್, ಕೇನೋ, ಮ್ಯಾವರಿಕ್ ಕಾರ್ಟರ್ ಮತ್ತು ಡ್ರೇಕ್ಸ್ ಮೊದಲಾದ ಮುಂಚೂಣಿಯ ನಟರುಗಳ ಸಹಾಯದಿಂದ ಸರಣಿ ಪುನರಾರಂಭವಾಯಿತು.

ಸೀಸನ್ ಎರಡರ ಅಂತ್ಯದಿಂದಲೇ ಸೀಸನ್ 3 ಆರಂಭವಾಗುತ್ತದೆ. ಅಂದರೆ ಜೇಮಿಯ ಕೊಲೆಯಿಂದ. ದುಶೇನ್ ಶೆಲ್ಲಿಯ ಜೊತೆ ವಿರಾಮವಾದ ಡಿನ್ನರ್ ಮಾಡುತ್ತಿರುತ್ತಾನೆ. ಜೇಮಿಯ ಕೊಲೆಯ ವಿಚಾರ ತಿಳಿದು ಆಘಾತವಾಗುತ್ತದೆ. ಸುಲ್ಲಿ ದುಶೇನ್‌ಗೆ ಅಂತಿಮವಾದ ವಾರ್ನಿಂಗ್ ನೀಡಿ ಕೊಲೆ ಬೆದರಿಕೆ ಹಾಕಿ ಹಿಂದಕ್ಕೆ ಸರಿಯುವಂತೆ ಮಾಡುತ್ತಾನೆ. ಆದರೆ ಈ ಕಣ್ಣಾಮುಚ್ಚಾಲೆ ಆಟ ಎಲ್ಲಿಯವರೆಗೆ ನಡೆಯುತ್ತದೆ ಎನ್ನುವುದನ್ನು ಸರಣಿಯಲ್ಲಿ ನೋಡಬಹುದು. ಸುಲ್ಲಿಯ ಪಾತ್ರದಲ್ಲಿ ಮಹತ್ವದ ಬದಲಾವಣೆಗಳಾಗುತ್ತವೆ. ಅವನಿಗೆ ಈಗ ತನ್ನ ಈ ಅವ್ಯವಹಾರಗಳ ಪ್ರಪಂಚದಲ್ಲಿ ಟಾಪ್ ಬಾಯ್ ಆಗಲು ಏನು ಮಾಡಬೇಕು, ಹೊಸ ಸಪ್ಲಯರ್ಸ್ ಜೊತೆಗೆ ಹೇಗೆ ನಡೆದುಕೊಳ್ಳಬೇಕು, ವೈರಿಗಳನ್ನು ಹೇಗೆ ನಿಭಾಯಿಸಬೇಕು ಎನ್ನುವುದರ ಬಗೆಗೆ ಮತ್ತಷ್ಟು ಸ್ಪಷ್ಟತೆ ಸಿಗುತ್ತಾ ಹೋಗುತ್ತದೆ.

ದುಶೇನ್ ಪಾತ್ರ ಕಳೆದ ಸೀಸನ್‌ಗೆ ಹೋಲಿಸಿದರೆ ಇಲ್ಲಿ ಮತ್ತಷ್ಟು ಭಾವುಕವಾಗಿ ಚಿತ್ರಿತವಾಗಿದೆ. ಹಿಂದಿನ ಸೀಸನ್‌ಗಿಂತ ಇಲ್ಲಿ ಅಧಿಕಾರ ಮತ್ತು ಹಣ ಎರಡರಲ್ಲೂ ಕಡಿಮೆ ದರ್ಜೆಯಲ್ಲಿರುವ ಆತನ ವಸ್ತುಸ್ಥಿತಿಗೆ ಅವನು ಹೊಂದಿಕೊಳ್ಳುತ್ತಿದ್ದಾನೆ. ಇಲ್ಲಿ ಸ್ಟೆಫ್ ಪಾತ್ರದ ಬೆಳವಣಿಗೆಯ ಕುರಿತೂ ಕಥೆ ಹೆಣೆಯಲಾಗಿದೆ. ತನ್ನಣ್ಣ ಜೇಮಿಯ ಅನುಪಸ್ಥಿತಿಯಲ್ಲಿ ತನ್ನ ಜೀವನವನ್ನು ನಿಭಾಯಿಸಿಕೊಂಡು ಹೋಗಬೇಕಾದ ಅನಿವಾರ್ಯತೆ ಸ್ಟೆಫ್‌ಗೆ ಇದೆ. ಜೇಮಿಯ ಹಳೆಯ ಜೊತೆಗಾರರ ಜೊತೆ ಸಂಬಂಧ ಬೆಳೆಸುವುದಾಗಿರಬಹುದು ಅಥವ ತನ್ನ ಗರ್ಲ್‌ಫ್ರೆಂಡ್‌ ಏರಿನ್ ಜೊತೆಗಿನ ಸಂಬಂಧ ಆಗಿರಬಹುದು… ಒಟ್ಟಿನಲ್ಲಿ ಸ್ಟೆಫ್‌ಗೆ ತನ್ನನ್ನು ತಾನು ಬೆಳೆದ ಗಂಡಸು ಎಂದು ಸಾಬೀತು ಮಾಡಿಕೊಳ್ಳಬೇಕಾದ ಅನಿವಾರ್ಯತೆ ಇದೆ.

ಏತನ್ಮಧ್ಯೆ ಸಮ್ಮರ್ ಹೌಸ್ ಸಮುದಾಯದಲ್ಲಿ ಒಂದಷ್ಟು ಅನಪೇಕ್ಷಿತ ಘಟನೆಗಳು ನಡೆಯುತ್ತವೆ. ಜನಗಳನ್ನು ಅವರ ಮನೆಗಳಿಂದ ಬಲವಂತವಾಗಿ ಹೊರಗೆ ಎಳೆತರಲಾಗುತ್ತದೆ. ಅಪಘಾತಗಳು ನಡೆಯುತ್ತವೆ. ಸಮುದಾಯ ವಿಧಿ ಇಲ್ಲದೆ ದಂಗೆ ಏಳಲು ನಿರ್ಧರಿಸುತ್ತದೆ. ಸರಣಿಯಲ್ಲಿ ಅನ್ಯಾಯ, ನಿಯತ್ತು ಇತ್ಯಾದಿ ಆಯಾಮಗಳನ್ನು ಹುಡುಕುತ್ತಲೇ ನೈತಿಕ ಧೋರಣೆಯ ಮಜಲುಗಳನ್ನು ಅರಸುವತ್ತ ಕಥೆ ತೆರೆದುಕೊಳ್ಳುತ್ತಾ ಹೋಗುತ್ತದೆ. ಯಾರು ಸರಿ, ಯಾರು ತಪ್ಪು ಎಂಬ ಹುಡುಕಾಟಗಳ ನಡುವೆಯೇ ಪಾತ್ರಗಳು ಬೀದಿ ಹೆಣವಾಗುತ್ತಾರೆ. ಕೆಲವರು ಆ ಜೀವನ ಸಾಕಾಗಿ ಹೊಸ ಜೀವನ ಅರಸುವತ್ತ ನಡೆಯುತ್ತಾರೆ. ಹಳೆಯ ಸೀಸನ್ನುಗಳಲ್ಲಿ ಗ್ಯಾಂಗ್‌ಸ್ಟರ್‌ ಬದುಕಿನ ವೈಭವೀಕರಣ ಇದ್ದರೆ ಈ ಸೀಸನ್ನಿನಲ್ಲಿ ಆಗಿರುವ ತಪ್ಪುಗಳಿಂದ ಕಲಿತ ಪಾಠ ಮತ್ತು ಇಡಬೇಕಾದ ಎಚ್ಚರಿಕೆಯ ಹೆಜ್ಜೆಗಳ ಬಗೆಗೆ ಮಹತ್ವ ಕೊಡಲಾಗಿದೆ.

ಆಶ್ಲೀ ವಾಲ್ಟರ್ಸ್, ಕೇನೋ ಮತ್ತು ಜಾಸ್ಮಿನ್ ಅವರ ಅದ್ಭುತ ಅಭಿನಯ ಈ ಸರಣಿಯ ಮಜಲುಗಳನ್ನು ಮತ್ತಷ್ಟು ತೀಕ್ಷ್ಣವಾಗಿಸಿರುವುದು ಒಪ್ಪಲೇಬೇಕು. ಅದರಲ್ಲೂ ಜಾಕ್ ಪಾತ್ರದಲ್ಲಿ ಜಾಸ್ಮಿನ್ ಅಭಿನಯವಂತೂ ಬಹಳ ಪರಿಣಾಮಕಾರಿಯಾಗಿದೆ. ಒಂದು ದುರಂತದ ಬಳಿಕ ಹೇಗೆ ತನ್ನೊಳಗಿನ ವಾತ್ಸಲ್ಯದ ಘಳಿಗೆಗಳನ್ನು ತೋರ್ಪಡಿಸುತ್ತಾಳೆ ಎನ್ನುವುದು ಬಹಳ ಆಪ್ತವಾಗಿ ಬಿಂಬಿತವಾಗಿದೆ. ಅವರವರು ಹಿಡಿದ ಹಾದಿಗಳು ಬೇರೆಯೇ ಆದರೂ ಎಂದಾದರೊಮ್ಮೆ ಅವರು ಸಂಧಿಸಲೇಬೇಕು ಎನ್ನುವುದನ್ನು ದುಶೇನ್ ಮತ್ತು ಸುಲ್ಲಿ ಅರಿತುಕೊಳ್ಳುವ ಘಳಿಗೆ ಬರುತ್ತದೆ. ಅಂತೂ ಅವರಿಬ್ಬರೂ ಪರಸ್ಪರ ಎದುರಾಗುವ ಘಳಿಗೆ ಬಂದಾಗ ಹೇಳಬೇಕಾದ ಮತ್ತು ಕೇಳಬೇಕಾದ ಮಾತುಗಳು ರವಾನೆಯಾಗುತ್ತವೆ.

ಒಂದು ವಿಷಾದಕರ ಮತ್ತು ಭಾವನಾತ್ಮಕ ಮುಕ್ತಾಯದೊಂದಿಗೆ ‘ಟಾಪ್ ಬಾಯ್’ ಸೀಸನ್ 3 ಅಂತ್ಯವಾಗುತ್ತದೆ. ಬಹಳ ಪರಿಣಾಮಕಾರಿಯಾದ ಬರವಣಿಗೆ ಮತ್ತು ದೃಶ್ಯಸಂಯೋಜನೆಯಿಂದ ಈ ಸರಣಿ ಬ್ರಿಟನ್‌ನ ಜನಪ್ರಿಯ ಮತ್ತು ಅತ್ಯುತ್ತಮ ಕ್ರೈಮ್ ಡ್ರಾಮಾಗಳ ಸಾಲಿಗೆ ಸೇರುತ್ತದೆ. ಬ್ರಿಟನ್ನಿನ ಕಪ್ಪುಜನಾಂಗ ಸಮುದಾಯದ ಗ್ಯಾಂಗ್‌ಸ್ಟರ್‌ ಜೀವನದ ಚಿತ್ರಣಗಳು, ಅದಕ್ಕೆ ಪೂರಕವಾದ ಸಂಗೀತ ಮತ್ತು ದೃಶ್ಯಸಂಯೋಜನೆ ಇವೆಲ್ಲವೂ ಬಹಳ ಪರಿಣಾಮಕಾರಿಯಾಗಿ ಈ ಸರಣಿಯಲ್ಲಿ ಚಿತ್ರಿತವಾಗಿದೆ. ಟಾಪ್ ಬಾಯ್ 3 Netflixನಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here