ಭುಪೀಂದರ್‌ಗೆ ಹಾಡೆಂದರೆ ಕೇವಲ ಸ್ವರಸಂಚಾರವಷ್ಟೇ ಅಲ್ಲ. ಅವರ ಹಾಡುಗಳೆಂದರೆ ಅದು ಸಾಹಿತ್ಯ ಮತ್ತು ಸಂಗೀತದ ಅನನ್ಯ ಸಂಗಮ. ಇದಕ್ಕೆ ಭುಪೀಂದರ್ ದನಿಯೂ ಸೇರಿದಾಗ ಅಲ್ಲೊಂದು ಸ್ವರ್ಗವೇ ಸೃಷ್ಟಿಯಾಗುತ್ತಿತ್ತು. ಇತ್ತೀಚೆಗೆ ನಮ್ಮನ್ನಗಲಿದ ಗಾಯಕ ಭುಪೀಂದರ್‌ ಸಿಂಗ್‌ ಅವರಿಗೆ ಅಕ್ಷರ ನಮನ.

‘Our sweetest songs are those that tell of saddest thoughts.’ ಎಂದು ಶೆಲ್ಲಿ ಹೇಳುತ್ತಾನೆ. ಕೆಲವು ಹಾಡುಗಳು ಹಾಗೆಯೇ, ನಾವು ಮರೆಯಲು ಬಯಸಿದ್ದನ್ನು, ಮರೆತೆವು ಎಂದುಕೊಂಡದ್ದನ್ನು ತಮ್ಮ ರಾಗದ ಗಾಳ ಹಾಕಿ ನಮ್ಮ ಎದೆಯಾಳದಿಂದಲೇ ಹೆಕ್ಕಿ, ನಮ್ಮ ಕಣ್ಣಾಲಿಗಳಲ್ಲಿಟ್ಟು ಕಂಬನಿಯನ್ನು ಕರೆಯುತ್ತವೆ. ಹಾಗೆಂದು ನಾವು ಆ ಹಾಡುಗಳನ್ನು ನಿಲ್ಲಿಸಬಲ್ಲೆವೆ? ಉಹೂ. ನಿಲ್ಲಿಸುವುದಿರಲಿ, ಕೆಲವು ಸಲ ಅವುಗಳನ್ನೇ ಹುಡುಕಿಕೊಂಡು ಅಲೆಯುತ್ತೇವೆ, ನಾವೇ ಕರೆಯುತ್ತೇವೆ. ಎದೆ ತುಂಬಿ ಒಮ್ಮೆ ಅತ್ತುಬಿಡಬೇಕು ಎಂದು ನಮ್ಮಲ್ಲಿ ಮೂಡುವ ಆ ಬಯಕೆಯಾದರೂ ಅದೆಷ್ಟು ತೀವ್ರವಾದದ್ದು.. ಹಾಗೆ ಕಂಬನಿಯನ್ನು ಕರೆಯಬೇಕೆಂದಾಗ ನನಗೆ ತಟ್ಟನೆ ನೆನಪಾಗುವವನು ಮುಖೇಶ್. ಬಹಳಷ್ಟು ದಿನ ನಾನು ಮುಖೇಶ್‌ನನ್ನು ನನ್ನ ಕಂಬನಿಯ ಸಖ ಎಂದೇ ಅಂದುಕೊಂಡಿದ್ದೆ. ಆಮೇಲೆ ನನಗೆ ಭುಪೀಂದರ್ ಸಿಕ್ಕ. ಇವನ ಹಾಡು ಕಂಬನಿಯನ್ನು ತರಿಸುವಷ್ಟು ಹರಿತವಾಗಿರಲಿಲ್ಲ, ಆದರೆ ಅವು ಹೃದಯವನ್ನು ಇಡಿಯಾಗಿ ಕಲಕಿ ಹಾಕುತ್ತಿದ್ದವು. ಅದೊಂದು ರೀತಿಯಲ್ಲಿ ಸಿಹಿಯಾದ ನೋವಿನಂತೆ. ಅವನ ದನಿಯಲ್ಲಿ ಒಂದು ವಿಶಿಷ್ಟವಾದ ತುಂಬುತನವಿತ್ತು, ವಜನ್ ಇದ್ದ ಈ ದನಿ ಕೆಲವು ಸಲ ತುಂಟತನದ್ದೂ ಆಗುತ್ತಿತ್ತು. ತನ್ನ ಗಿಟಾರ್ ಮೂಲಕ, ದನಿಯ ಮೂಲಕ, ಆ ದನಿಯುಟ್ಟ ಪದಗಳ ಮೂಲಕ ಅವನು ಹತ್ತಿರಾಗುತ್ತಲೇ ಹೋದ. ಇದು ಭುಪೀಂದರ್‌ನ ಹಾಡುಗಳ ಮೂಲಕ ಅವನನ್ನು ನೆನಪು ಮಾಡಿಕೊಳ್ಳುವ ಒಂದು ಸಣ್ಣ ಪ್ರಯತ್ನ…

ಮೊಟ್ಟಮೊದಲ ಬಾರಿಗೆ ನನ್ನನ್ನು ಆವರಿಸಿದ ಭುಪೀಂದರ್ ಹಾಡೆಂದರೆ ‘ಐತ್ ಬಾರ್’ ಚಿತ್ರದ, ‘ಕಿಸೀ ನಜರ್ ಕೊ ತೇರಾ ಇಂತಜಾರ್ ಆಜ್ ಭೀ ಹೈ…’ – ಹಸನ್ ಕಮಾಲ್ ಅವರ ರಚನೆಗೆ ಬಪ್ಪಿ ದಾ ಸಂಗೀತ ಸಂಯೋಜನೆ ಮಾಡಿದ್ದರು. ಭುಪೀಂದರ್ ಮತ್ತು ಆಶಾ ಭೋಸ್ಲೆ ಇದಕ್ಕೆ ದನಿಯಾಗಿದ್ದರು. ಅಭಿನಯಕ್ಕೆ ಎಂದೂ ಹೆಸರಾಗದ ಸುರೇಶ್ ಒಬೆರಾಯ್‌ರಿಂದ ಈ ಹಾಡನ್ನು ಕಾಪಾಡಿದ್ದು ಹಾಡಿಗೆ ಜೀವಕೊಟ್ಟಿದ್ದ ಈ ಹಾಡುಗಾರ ಮಾತ್ರ.

‘ಯಕೀನ್ ನಹೀ ಹೈ ಮಗರ್, ಆಜ್ ಭೀ ಎ ಲಗ್ ತಾ ಹೈ
ಮೇರಿ ತಲಾಶ್ ಮೆ ಶಾಯದ್ ಬಹಾರ್ ಆಜ್ ಭಿ ಹೈ’
‘ಭರವಸೆ ಅಂತಲ್ಲ, ಆದರೂ ಇವತ್ತಿಗೂ ಅನಿಸುತ್ತದೆ
ನನ್ನ ಹುಡುಕಾಟದಲಿ ಬಹುಶಃ ಇಂದಿಗೂ ವಸಂತನಿರಬಹುದು’
ಎಂದು ಭುಪೀಂದರ್ ಹಾಡುತ್ತಿದ್ದರೆ ಗಾಯಗೊಂಡ ಪ್ರತಿ ಹೃದಯಕ್ಕೂ ಅದನ್ನು ನಂಬಬೇಕು ಅನ್ನಿಸುತ್ತಿತ್ತು. ಹಾಗೆ ನೋಡಿದರೆ ಇದೇ ಹಾಡಿನಲ್ಲಿ ಆಶಾತಾಯಿಯ ದನಿಯಲ್ಲಿನ
ಓ ಪ್ಯಾರ್ ಜಿಸ್ ಕೆ ಲಿಯೆ ಹಮ್ ನೆ ಚೋಡ್ ದೀ ದುನಿಯಾ
ವಹಾ ಕಿ ರಾಹ್ ಪೆ ಘಾಯಲ್ ಓ ಪ್ಯಾರ್ ಆಜ್ ಭೀ ಹೈ.
ಯಾವ ಪ್ರೀತಿಗಾಗಿ ನಾನು ಜಗತ್ತನ್ನೇ ಬಿಟ್ಟುಕೊಟ್ಟೆನೋ
ಭರವಸೆಗಳ ಹಾದಿಯಲ್ಲಿ ಗಾಯಗೊಂಡ ಆ ಪ್ರೀತಿ ಇಂದಿಗೂ ಹಾಗೇ ಇದೆ.
ಅದೆಷ್ಟು ಬಾರಿ ಕೇಳಿದ್ದೇನೆ, ಗುನುಗುನಿಸಿದ್ದೇನೆ ಈ ಹಾಡನ್ನು…

ಸ್ವತಃ ಸಂಗೀತಗಾರರಾಗಿದ್ದ ನಾಥಸಿಂಗ ಅವರ ಮಗನಾಗಿದ್ದ ಭುಪೀಂದರ್, ಆಲ್ ಇಂಡಿಯಾ ರೇಡಿಯೋದಲ್ಲಿ ಕ್ಯಾಶುಯಲ್ ಕಲಾವಿದರಾಗಿ ಗಿಟಾರ್ ನುಡಿಸುತ್ತಿದ್ದವರು. ಅವರ ಸಂಗೀತವನ್ನು ಕೇಳಿ ಮೆಚ್ಚಿದ ಮದನ್ ಮೋಹನ್ ಅವರನ್ನು ಮುಂಬೈಗೆ ಕರೆತರುತ್ತಾರೆ. ‘ಹಕೀಕತ್’ ಚಿತ್ರದ ‘ಹೋಕೆ ಮಜಬೂರ್ ಮುಝೆ ಉಸ್ ನೆ ಬುಲಾಯಾ ಹೋಗ’ ಹಾಡಿಗೆ ಅವರು ದನಿಯಾಗುವಾಗ, ಆ ಹಾಡನ್ನು ಹಾಡುತ್ತಿದ್ದ ಘಟಾನುಘಟಿಗಳು ಮಹಮದ್ ರಫಿ, ಮನ್ನಾಡೆ ಮತ್ತು ತಲತ್ ಮೆಹಮೂದ್. ಆ ದನಿಗಳ ಜೊತೆಯಲ್ಲಿ, ಸರಿಸಮನಾಗಿ ನಿಂತ ದನಿ ಇವರದು. ನಂತರ ಅವರು ಸೇರಿದ್ದು ಆರ್.ಡಿ.ಬರ್ಮನ್ ಅಡ್ಡಾ. ಪಂಚಮ್, ಗುಲ್ಜಾರ್ ಮತ್ತು ಆಶಾತಾಯಿಯವರೊಂದಿಗೆ ಇವರದು ಸ್ವರಗಳ ಸಂಬಂಧ.

ನೈಲಾನ್ ತಂತಿಗಳ ಸ್ಪಾನಿಶ್ ಗಿಟಾರ್, ತೊಡೆಯ ಮೇಲಿಟ್ಟುಕೊಂಡು ನುಡಿಸುವ ಹವಾಯನ್ ಗಿಟಾರ್‌ಗಳಲ್ಲಿದ್ದ ಇವರ ಪ್ರಾವಿಣ್ಯ ಪಂಚಮ್‌ರ ಮನವನ್ನೂ ಸೆಳೆದಿತ್ತು. ‘ದಮ್ ಮಾರೋ ದಮ್, ಮಿಟ್ ಜಾಯೇ ಹಮ್, ಬೋಲೋ ಸುಭೋ ಶ್ಯಾಂ ಹರೆಕೃಷ್ಣ. ಹರೇ ರಾಂ’, ‘ತುಮ್ ಜೋ ಮಿಲ್ ಗಯೆ ಹೋ, ತೋ ಯೆ ಲಗತಾ ಹೈ ಕೆ ಜಹಾನ್ ಮಿಲ್ ಗಯಾ’, ‘ಚುರಾ ಲಿಯಾ ಹೈ ತುಮ್ ನೆ ಜೋ ದಿಲ್ ಕೊ, ನಜರ್ ನಾ ಚುರಾನ ಸನಂ’, ‘ಮೆಹಬೂಬಾ, ಮೆಹಬೂಬಾ…’ ಮುಂತಾದ ಹಾಡುಗಳಿಗೆ ಇವರ ಗಿಟಾರ್ ಹೊಸ ಆಯಾಮವನ್ನೇ ಕೊಟ್ಟಿತ್ತು. ಈ ಬಗ್ಗೆ ಒಂದು ತಮಾಷೆಯ ಕಥೆ ಇದೆ. ದಮ್ ಮಾರೋ ದಮ್ ಹಾಡಿನ ಬಗ್ಗೆ ವಿವರಿಸುತ್ತಾ, ಚಿತ್ರದ ನಿರ್ದೇಶಕ ದೇವಾನಂದ ಕೊಟ್ಟ ಚಿತ್ರಣ ಹೀಗೆ, ‘ಒಂದು ಕೊಠಡಿ, ಅದರ ತುಂಬಾ ಅಫೀಮಿನ ಹೊಗೆ ತೇಲಾಡುತ್ತಿದೆ, ಅದರ ನಡುವೆ ಬರುವ ಹಾಡು ಇದು’ – ಕೇಳುತ್ತಿದ್ದ ಭುಪೀಂದರ್ ಥಟ್ಟನೆ ಸಂಗೀತದ ತುಣುಕೊಂದನ್ನು ನುಡಿಸಿದ್ದರು, ಚಪ್ಪಾಳೆ ತಟ್ಟಿದ ಪಂಚಮ್ ದಾ, ‘This is it!’ ಎಂದಿದ್ದರು. ಮಾದಕವಾದ ಆ ಸಂಗೀತದ ಅಲೆ ಹೀಗೆ ಹುಟ್ಟಿಕೊಂಡಿತ್ತು. ಹಿಂದಿ ಚಿತ್ರರಂಗ ಬಹುಶಃ ಇವರ ಸ್ವರಕ್ಕಿಂತ ಹೆಚ್ಚಾಗಿ ಇವರ ಗಿಟಾರ್ ಅನ್ನು ಬಳಸಿಕೊಂಡಿದೆ. ಹಾಗೆಂದು ಭುಪೀಂದರ್ ಸುಮ್ಮನೆ ಕೂರಲಿಲ್ಲ. ಅಪ್ರತಿಮ ಸಾಹಿತ್ಯದ ಗಜಲ್‌ಗಳನ್ನು ಹುಡುಕಿ, ಹುಡುಕಿ ಹಾಡಿದರು. ಗಿಟಾರ್ ಅನ್ನು ಗಜಲ್‌ಗೆ ಒಗ್ಗಿಸಿದರು.

ಇವರನ್ನು ಹಿಂದಿ ಚಿತ್ರರಂಗಕ್ಕೆ ಪರಿಚಯಿಸಿದ್ದ ಮದನ್ ಮೋಹನ್ ಅವರೇ ‘ಮೌಸಮ್’ ಚಿತ್ರದಲ್ಲಿ ಸಂಜೀವ್ ಕುಮಾರ್ ಅವರಿಗಾಗಿ ಇವರಿಂದ ಹಾಡಿಸಿದ್ದು, ‘ದಿಲ್ ಡೂಂಡ್ ತಾ ಹೈ ಫಿರ್ ವಹಿ, ಫುರಸತ್ ಕಿ ರಾತ್ ದಿನ್..’ ಖುಷಿ ಮತ್ತು ನೋವು ಎರಡೂ ಛಾಯೆಗಳಲ್ಲಿ, ಎರಡು ತಾಳಗಳಲ್ಲಿ ಬರೆದಿದ್ದ ಎರಡೂ ಹಾಡುಗಳನ್ನೂ ಇವರ ಬಳಿಯೇ ಹಾಡಿಸಿದ್ದರು. ಭುಪೀಂದರ್ ಅವರ ಮರೆಯಲಾಗದ ಹಾಡುಗಳಲ್ಲಿ ಇದೂ ಒಂದು. ಒಂದೊಮ್ಮೆ ಮನೆಯಂಗಳದಲ್ಲೇ ದೊರಕುತ್ತಿದ್ದ ವಿರಾಮ ಬದುಕಿನ ಯಾವುದೋ ಘಳಿಗೆಯಲ್ಲಿ ನಮಗೇ ಗೊತ್ತಿಲ್ಲದಂತೆ ದುರ್ಲಭದ ವಸ್ತುವಾಗಿಬಿಟ್ಟಿರುತ್ತದೆ. ಕೈಯಳವಿನಲ್ಲೇ ಇದ್ದಾಗ ಬೆಲೆಯೇ ಇಲ್ಲದ ಆ ವಿರಾಮಕ್ಕೆ ಹಂಬಲಿಸುವ ಕಾಲವೂ ಬರುತ್ತದೆ. ಅದಕ್ಕಾಗಿ ಪರಿತಪಿಸುವ ಈ ಹಾಡಿನಲ್ಲಿ, ಆ ಪರಿತಾಪ ಎದೆಯಾಳದಿಂದ ಉಕ್ಕುವಂತೆ ಭುಪೀಂದರ್ ಹಾಡುತ್ತಾರೆ.

ಬರ್ಫೀಲಿ ಸರ್ದಿಯೋಂ ಮೆ, ಕಿಸಿ ಭೀ ಪಹಾಡ್ ಪರ್,
ವಾದಿ ಮೆ ಗೋಂಜ್ ತೀ ಹುಯಿ ಖಾಮೋಶಿಯಾಂ ಸುನೆ
ಆಂಖೋ ಮೆ ಭೀಗಿ, ಭೀಗಿ ಸೆ ಲಮ್ಹೆ ಲಿಯೇ ಹುಯೆ
ದಿಲ್ ಡೂಂಡ್ ತಾ ಹೈ, ಫಿರ್ ವಹಿ ಫುರ್ಸತ್ ಕೆ ರಾತ್ ದಿನ್

ಹಿಮತುಂಬಿದ ಚಳಿಗಾಲವೊಂದರಲ್ಲಿ, ಯಾವುದೋ ಬೆಟ್ಟದ ಮೇಲೆ
ಕಣಿವೆಯೊಳಗೆಲ್ಲೋ ಅನುರಣಿಸುತ್ತಿರುವ ಮೌನವನ್ನು ಆಲಿಸುತ್ತಾ
ಕಣ್ಣುಗಳಲ್ಲಿ ಒದೆಒದ್ದೆ ಕ್ಷಣಗಳನ್ನು ತುಂಬಿಕೊಂಡಿದ್ದಂತಹ
ಆ ಪುರುಸೊತ್ತಿನ ಹಗಲುರಾತ್ರಿಗಳನ್ನು ಹೃದಯ ಅರಸುತ್ತಿದೆ..
ಹಾಗೆ ಒಂದು ಗಂಭೀರವಾದ ಸತ್ಯವನ್ನು ಹೇಳುತ್ತಲೇ, ತನ್ನ ಮಾಧುರ್ಯದಿಂದಲೂ ಮನಸ್ಸೆಳೆಯುವ ಹಾಡು,
ಕಿಸಿಕೊ ಯಹಾ ಮುಕಮ್ಮಲ್ ಜಹಾನ್ ನಹೀ ಮಿಲ್ತಾ… – ಯಾರಿಗೂ ಇಲ್ಲಿ ಪೂರ್ತಿ ಪ್ರಪಂಚ ಸಿಗುವುದೇ ಇಲ್ಲ. ಆಕಾಶವನ್ನು ತಬ್ಬಿಕೊಂಡಾಗ, ಭೂಮಿ ಹಾಗೆಯೇ ಉಳಿದುಬಿಡುತ್ತದೆ, ಭೂಮಿ ನನ್ನದು ಎಂದುಕೊಂಡಾಗ ಆಕಾಶ ದೂರ ಉಳಿದುಬಿಡುತ್ತದೆ ಎನ್ನುವ ನಿದಾ ಫಜಲೀ ಬರೆದಿರುವ ಈ ಹಾಡು ಅನೇಕ ದುರ್ಭರ ಕ್ಷಣಗಳಲ್ಲಿ ನೆನಪಾಗಿ ಬಿಡುತ್ತದೆ.

ತೇರೇ ಜಹಾನ್ ಮೆ ಐಸಾ ನಹಿ ಕಿ ಪ್ಯಾರ್‌ನ ಹೋ
ಜಹಾ ಉಮ್ಮೀದ್ ಹೊ ಇಸ್ ಕಿ ವಹಾ ನಹೀ ಮಿಲ್ತಾ
ನಿನ್ನ ಈ ಜಗತ್ತಿನಲ್ಲಿ ಪ್ರೇಮ ಸಿಗುವುದೇ ಇಲ್ಲ ಅಂತಲ್ಲ
ಆದರೆ ಎಲ್ಲಿ ಭರವಸೆ ಇಟ್ಟುಕೊಂಡಿರುವೆವೋ ಅಲ್ಲಿ ಸಿಗುವುದಿಲ್ಲ
ಎಂದು ಅವನು ಹಾಡುತ್ತಿದ್ದರೆ, ಎಂದೂ ಮುಕಮ್ಮಲ್ – ಪರಿಪೂರ್ಣ ಆಗದ ನಮ್ಮ ಕನಸುಗಳು ಕಣ್ಣಿಗೆ ನೆಟ್ಟು ಕಣ್ಣೀರು ತರಿಸುತ್ತವೆ.

ಭುಪೀಂದರ್ ಗೆ ಹಾಡೆಂದರೆ ಕೇವಲ ಸ್ವರಸಂಚಾರವಷ್ಟೇ ಅಲ್ಲ. ‘ತನ್ನೊಳಗೊಂದು ಆಳವನ್ನು ಹೊಂದಿಲ್ಲದ ಹಾಡೆಂದರೆ ನನ್ನಮಟ್ಟಿಗೆ ಆತ್ಮವಿಲ್ಲದ ಹಾಡು’ ಎನ್ನುತ್ತಿದ್ದ ಭುಪೀಂದರ್ ಅದೇ ಕಾರಣಕ್ಕೆ ಕೆಲವು ಹಾಡುಗಳನ್ನು ನಿರಾಕರಿಸಿದ್ದೂ ಇದೆ. ಬಹುಶಃ ಅದಕ್ಕೇ ಇರಬೇಕು ಆತ ಹಾಡಿದ ಹಾಡುಗಳೆಂದರೆ ಅದು ಸಾಹಿತ್ಯ ಮತ್ತು ಸಂಗೀತದ ಅನನ್ಯ ಸಂಗಮ. ಇದಕ್ಕೆ ಭುಪೀಂದರ್ ದನಿಯೂ ಸೇರಿದಾಗ ಅಲ್ಲೊಂದು ಸ್ವರ್ಗವೇ ಸೃಷ್ಟಿಯಾಗುತ್ತಿತ್ತು. ಇಂತಹ ಗಾಯಕನಿಗೆ ಸ್ವತಃ ಗಾಯಕಿಯಾಗಿದ್ದ ಮಿತಾಲಿ ಸಂಗಾತಿಯಾದಾಗ ಅವರಿಬ್ಬರ ಅನೇಕ ಕ್ಯಾಸೆಟ್‌ಗಳು, ಸೀಡಿಗಳು ಬಂದವು. ‘ಆಪಸ್ ಕಿಬಾತ್’, ‘ದರ್ದ್ ಎ ದಿಲ್’, ‘ಅಕ್ಸರ್’, ‘ದಿಲ್ ಕಿ ಜುಬಾನ್’, ‘ಜಸ್ ಬಾತ್’, ‘ಚಾಂದ್ ಪರೋಸಾ ಹೈ’ ಕೆಲವು ಉದಾಹರಣೆಗಳು ಮಾತ್ರ.

ಸ್ನೇಹಿತನೊಬ್ಬ ಕೊಟ್ಟಿದ ಕ್ಯಾಸೆಟ್‌ನಲ್ಲಿಯ ಒಂದು ಹಾಡನ್ನು ಅದೆಷ್ಟು ಬಾರಿ ಕೇಳಿದ್ದೆನೋ ಲೆಕ್ಕ ಇಲ್ಲ.
ಶಮ್ಮಾ ಜಲಾಯೆ ರಕ್ ನಾ, ಜಬ್ ತಕ್ ಕೆ ಮೇ ನ ಆವೂಂ
ಖುದ್ ಕೋ ಬಚಾಯೆ ರಕ್ ನ, ಜಬ್ ತಕ್ ಕೆ ಮೇ ನ ಆವೂಂ
‘ಮಾಸೂಮ್’ ಚಿತ್ರದಲ್ಲಿ ಅವರು ಹಾಡಿದ ಇನ್ನೊಂದು ಹಾಡು, ‘ಹುಜೂರ್ ಇಸ್ ತರಹ್ ಸೆ ನ ಇತ್ ರಾತೆ ಚಲಿಯೇ..’ ಎರಿಕ್ ಸೆಗಲ್ ರಚಿಸಿರುವ, ‘Man, Woman and Child’ ಕಾದಂಬರಿಯನ್ನು ಗುಲ್ಜಾರ್ ‘ಮಾಸೂಮ್‌’ ಚಿತ್ರವಾಗಿ ರೂಪಾಂತರಿಸಿದ್ದರು. ಆ ಚಿತ್ರದಲ್ಲಿ ಗಂಡ, ಹೆಂಡತಿಯ ಸಂಬಂಧವನ್ನು ನಿರ್ವಹಿಸುವಾಗ ಅವರು ತೋರಿಸಿದ ಸೂಕ್ಷ್ಮಸಂವೇದನೆ ಒಂದು ಬೆಂಚ್ ಮಾರ್ಕಿನಂತೆ ಇಂದಿಗೂ ಇದೆ. ಆ ಚಿತ್ರದ ಈ ಹಾಡಿನ ಈ ಸಾಲುಗಳೆಂದರೆ ನನಗೆ ಈಗಲೂ ಬೆರಗು,
ಬಹುತ್ ಖೂಬ್ ಸೂರತ್ ಹೈ ಹರ್ ಬಾತ್ ಲೇಕಿನ್
ಅಗರ್ ದಿಲ್ ಭೀ ಹೋತಾ ತೋ ಕ್ಯಾ ಬಾತ್ ಹೋತಿ
ಲಿಖಿ ಜಾತಿ ಫಿರ್ ದಾಸ್ತಾನ್ ಎ ಮುಹಬ್ಬತ್
ಇಕ್ ಅಫ್ಸಾನೆ ಜೈಸೆ ಮುಲಾಖಾತ್ ಹೋತಾ

ಪ್ರತಿಯೊಂದೂ ಬಹಳ ಸುಂದರವಾಗಿಯೇ ಇದೆ
ಆದರೆ ಅವುಗಳಲ್ಲಿ ಹೃದಯವೂ ಇದ್ದಿದ್ದರೆ ಇನ್ನೂ ಸೊಗಸಿತ್ತು
ಉತ್ಕಟ ಪ್ರೇಮದ ಕಾವ್ಯವೊಂದು ಬರೆಯಲ್ಪಡುತ್ತಿತ್ತು
ಒಂದು ಪ್ರೇಮಕಥೆಯಂತಹ ಭೇಟಿ ನಿಜವಾಗುತ್ತಿತ್ತು
ಹಾಗೆ ನನ್ನನ್ನು ಕಾಡುವ ಇನ್ನೂ ಕೆಲವು ಹಾಡುಗಳೆಂದರೆ, ‘ಕರೋಗೆ ಯಾದ್ ತೊ, ಹರ್ ಬಾತ್ ಯಾದ್ ಆಯೇಗಿ, ಗುಜರ್ತೆ ವಖ್ತ್ ಕಿ ಹರ್ ಮೌಜ್ ಟೆಹರ್ ಜಾಯೇಗಿ’, ‘ಬೀತಿ ನಾ ಬಿತಾಯಿ ರೈನಾ…’, ‘ನಾಮ್ ಗುಮ್ ಜಾಯೇಗಾ’, ‘ಇಕ್ ಅಧೂರಿ ಸಿ ಮುಲಾಖಾತ್ ಹುಯಿ ಥಿ ಜಿನ್ಸೆ’, ‘ಪಹಾಡೋಂ ಪೆ ಕಲ್ ಶಬ್’ ಹೀಗೆ ಪಟ್ಟಿ ಬೆಳೆಯುತ್ತಲೇ ಇರುತ್ತದೆ.
ಅಂದಹಾಗೆ ಭುಪೀಂದರ್ ಕನ್ನಡದಲ್ಲೂ ಹಾಡಿದ್ದಾರೆ. ‘ಭಕ್ತ ಸಿರಿಯಾಳ’ ಚಿತ್ರದ ‘ಅತಿಥಿ ಸೇವೆಯೆ ಪಾವನವೆಂದು ಪಾಲಿಸಿಕೊಂಡಿಹ ನಮಗೆ’ ಅವರದೇ ಕಂಠದಿಂದ ಮೂಡಿಬಂದ ಹಾಡು.
80 ರ ದಶಕದ ನಂತರ ಹಿಂದಿ ಚಿತ್ರಗಳ ಹಾಡುಗಳಲ್ಲಿ ಉರ್ದುವಿನ ಬನಿ ಮತ್ತು ಮಾಧುರ್ಯ ಎರಡೂ ಬತ್ತುತ್ತಾ ಬಂತು. ಆ ಖಾಲಿತನದಲ್ಲಿ ಇರುವ ಮನಸ್ಸು ಭುಪೀಂದರ್‌ಗೆ ಇರಲಿಲ್ಲ. ಅವರು ಹಿಂದಿ ಚಿತ್ರರಂಗದಿಂದ ದೂರಾಗುತ್ತಾ ಬಂದರು. ಅದರಿಂದ ಗಜಲ್ ಜಗತ್ತು ಶ್ರೀಮಂತವಾಯ್ತು ಎಂದರೆ ಸುಳ್ಳಲ್ಲ. ಭುಪೀಂದರ್ ಮತ್ತು ಮಿತಾಲಿ ಅನೇಕ ಕಾರ್ಯಕ್ರಮಗಳನ್ನು ಕೊಡತೊಡಗಿದರು. ಅಲ್ಲದೆ ಕಲಾವಿದರ ಮಟ್ಟಿಗೆ ಸ್ಟೇಜ್ ಶೋ ಎಂದರೆ ಅದೊಂದು ರೀತಿಯಲ್ಲಿ ಅಲ್ಲೇ ಡ್ರಾ, ಅಲ್ಲೇ ಬಹುಮಾನ ಇದ್ದಂತೆ. ಆ ಕ್ಷಣ ಪ್ರೇಕ್ಷಕರ ಚಪ್ಪಾಳೆಯ ಮೆಚ್ಚುಗೆ, ಅವರ ಕಂಬನಿ, ಅವರ ಕಣ್ಣುಗಳ ಆರಾಧನೆ ಇದು ಭುಪೀಂದರ್ ಗೆ ಹೆಚ್ಚಿನ ಸಾರ್ಥಕತೆಯನ್ನು ಕೊಡುತ್ತಿತ್ತು ಎಂದು ಅವರೇ ಹೇಳಿಕೊಂಡಿದ್ದಾರೆ.
ಐದು ದಶಕಗಳ ಕಾಲ ಹಾಡಿದ ಈ ದನಿ ಈಗ ಮೂಕವಾಗಿದೆ. ಮೊನ್ನೆಯಿಂದ ಮತ್ತೆಮತ್ತೆ ನಾನು ಅವರ ಹಾಡುಗಳನ್ನು ಕೇಳುತ್ತಲೇ ಇದ್ದೇನೆ. ಹೀಗಲ್ಲದೆ ಆ ಗಂಧರ್ವನಿಗೆ ನಮನ ಸಲ್ಲಿಸುವುದಾದರೂ ಹೇಗೆ?

LEAVE A REPLY

Connect with

Please enter your comment!
Please enter your name here