ಇಲ್ಲಿ ಪ್ರೀತಿಯಿದೆ, ಪ್ರೇಮವಿದೆ, ವಂಚನೆಯಿದೆ, ಅವ್ಯವಹಾರಗಳಲ್ಲಿ ತೊಡಗಿರುವ ಜನಗಳ ಜೀವನ ಪರಿಚಯ ಇದೆ. ಆದರೆ ಯಾವುದೂ ಮನಮುಟ್ಟುವಂತೆ ಸಮರ್ಪಕವಾಗಿ ನಿರೂಪಿತವಾಗಿಲ್ಲ. ಚಿತ್ರದ ಆರಂಭದಿಂದಲೇ ಒಂದು ರೀತಿಯ ಗೋಜಲು ಗೋಜಲಾದ ನಿರೂಪಣೆ, ಬಿಗಿಯಿಲ್ಲದ ಚಿತ್ರಕತೆ, ತೀರಾ ಸುಮಾರು ಎನಿಸುವ ಸಂಭಾಷಣೆ ಮತ್ತು ಅಭಿನಯ. ‘ಟೀಕು ವೆಡ್ಸ್ ಶೇರು’ ಆಮೇಜಾನ್ ಪ್ರೈಮ್‌ನಲ್ಲಿ ಸ್ಟ್ರೀಮ್‌ ಆಗುತ್ತಿದೆ.

‘ಟೀಕು ವೆಡ್ಸ್ ಶೇರು’ ಕಂಗನಾ ರನಾವತ್ ಅವರ ನಿರ್ಮಾಣದಲ್ಲಿ ಬಂದಿರುವ ಚಿತ್ರ. ಇದರ ನಿರ್ದೇಶಕರು ಸಾಯಿ ಕಬೀರ್. ಚಿತ್ರದ ಕತೆಯಲ್ಲಿ ಹೊಸದೇನೂ ಇಲ್ಲ. ಜೀವನೋಪಾಯಕ್ಕೆ ಚಿತ್ರಗಳಲ್ಲಿ ಸಹನಟನ ಪಾತ್ರ ಮಾಡುತ್ತಾ ಜೊತೆಗೆ ತಲೆಹಿಡುಕನ ಕೆಲಸ ಮಾಡುತ್ತಾ ಹಣವಂತನ ಥರ ಸೋಗು ಹಾಕುತ್ತಾ ಬದುಕುವ ನಾಯಕ. ಮುಂಬೈಗೆ ಹೋಗಿ ದೊಡ್ಡ ಸಿನಿಮಾ ತಾರೆ ಆಗಬೇಕು ಎಂಬ ಆಸೆಯ ಹಠಮಾರಿ ಮತ್ತು ಅವಿವೇಕಿ ನಾಯಕಿ. ಹೇಗಾದರೂ ಸರಿ ತನಗೊಂದು ಮದುವೆ ಬೇಕು, ತನ್ನದು ಎಂಬ ಸಂಸಾರ ಬೇಕು ಎನ್ನುವ ಒಂದು ಆಸೆಯಲ್ಲಿ ಹೆಣ್ಣು ನೋಡಲು ಬರುತ್ತಾನೆ ಶೇರು. ಹುಡುಗ ಮುಂಬೈ ನಿವಾಸಿ ಎಂದು ತಿಳಿದು ತನ್ನ ವೈಯ್ಯಕ್ತಿಕ ಉದ್ದೇಶ ಸಾಧಿಸಿಕೊಳ್ಳಲು ಟೀಕು ತನ್ನ ಬಾಯ್‌ಫ್ರೆಂಡ್‌ ಜೊತೆಗೆ ಸೇರಿ ಉಪಾಯ ಮಾಡಿ ಶೇರುವನ್ನು ಮದುವೆಯಾಗುತ್ತಾಳೆ.

ಮುಂಬೈಗೆ ಬಂದೊಡನೆ ತಾನು ಬಸುರಿ ಎಂದು ತಿಳಿದು ಮನೆ ಬಿಟ್ಟು ಓಡಿಹೋಗುತ್ತಾಳೆ. ಅವಳ ಬಾಯ್ ಫ್ರೆಂಡ್ ತನಗೆ ಈಗಾಗಲೇ ಮದುವೆ ಆಗಿದೆ ಎಂದು ಹೇಳಿ ಕೈತೊಳೆದುಕೊಳ್ಳುತ್ತಾನೆ. ಆತ್ಮಹತ್ಯೆಗೆ ಯತ್ನಿಸಿ ಬದುಕುಳಿಯುವ ಟೀಕುವನ್ನು ಶೇರು ಮನೆಗೆ ಕರೆತಂದು ಅವಳ ತಂದೆಯ ಮನೆಗೆ ಬಿಟ್ಟುಬರುವ ಪ್ರಸ್ತಾಪ ಮಾಡುತ್ತಾನೆ. ತಂದೆ ಮನೆಗೆ ಮರಳಿ ಹೋಗಲು ಇಷ್ಟಪಡದ ಟೀಕು ಭಂಡತನದಲ್ಲಿ ಅಲ್ಲೇ ಉಳಿಯುತ್ತಾಳೆ. ಶೇರು ಅವಳನ್ನೇ ಮನಸಾರೆ ಇಷ್ಟಪಡುತ್ತಿದ್ದೀನಿ ಎಂದು ತಿಳಿಸಿ ಅವಳ ಮಗುವನ್ನೂ ಒಪ್ಪಿಕೊಂಡು ಸಂಸಾರ ನಡೆಸಲು ಶುರು ಮಾಡುತ್ತಾನೆ.

ಹಣ ಮತ್ತು ಐಷಾರಾಮಿ ಬದುಕನ್ನು ಆಸೆಪಡುವ ಹೆಂಡತಿಯ ಮುಂದೆ ತನ್ನ ಬಡತನವನ್ನು ತೋರಿಸಲು ಇಷ್ಟಪಡದ ಶೇರು ಸುಳ್ಳುಹೇಳುತ್ತಾ ಹೇಗೋ ಅವ್ಯವಹಾರಗಳನ್ನು ಮಾಡುತ್ತಾ ಹಣ ತಂದು ಸುರಿಯುತ್ತಾ ಸಂಸಾರ ನಡೆಸುತ್ತಿರುತ್ತಾನೆ. ತನ್ನ ಗಂಡ ಶ್ರೀಮಂತ ಎಂದೇ ನಂಬಿಕೊಂಡು ಟೀಕು ಸಂತೋಷವಾಗಿ ಅವನ ಜೊತೆ ಇರುತ್ತಾಳೆ. ಜೊತೆಗೆ ಅವಳ ತಂಗಿ ಸನಾ ಕೂಡ ಅದೇ ಮನೆಯಲ್ಲಿ ಇರುತ್ತಾಳೆ. ಆಕೆಯನ್ನು ಟೀಕು ಮನೆಯವರೇ ಟೀಕು ಮೇಲೆ ನಂಬಿಕೆಯಿಲ್ಲದೆ ಜೊತೆಗೆ ಇದ್ದು ನೋಡಿಕೋ ಎಂದು ಕಳುಹಿಸಿರುತ್ತಾರೆ.

ಆದರೆ ಮೋಸದ ಪರದೆ ಸರಿಯಲೇಬೇಕು. ಅದು ಸರಿದಾಗ ಏನಾಗುತ್ತದೆ? ಶೇರುವಿನ ಸತ್ಯಗಳು ಟೀಕುಗೆ ತಿಳಿದಾಗ ಅವಳ ಪ್ರತಿಕ್ರಿಯೆ ಹೇಗಿರುತ್ತದೆ? ಟೀಕು, ಶೇರು ಜೀವನದಲ್ಲಿ ಮುಂದೆ ಏನಾಗುತ್ತದೆ ಎಂದು ತಿಳಿಯಲು ಚಿತ್ರವನ್ನು ನೋಡಬೇಕು. ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಚಿತ್ರವನ್ನು ಹಾಸ್ಯಮಿಶ್ರಿತ ಲಘು ಧಾಟಿಯಲ್ಲಿ ನಿರೂಪಿಸಲು ಪ್ರಯತ್ನ ಮಾಡಿ ಅಮೋಘವಾಗಿ ಸೋತಿದ್ದಾರೆ ಎಂದು ಹೇಳಬಹುದು! ಏಕೆ ಎಂದು ನೋಡೋಣ ಬನ್ನಿ.
ಇಲ್ಲಿ ಪ್ರೀತಿಯಿದೆ, ಪ್ರೇಮವಿದೆ, ವಂಚನೆಯಿದೆ, ಅವ್ಯವಹಾರಗಳಲ್ಲಿ ತೊಡಗಿರುವ ಜನಗಳ ಜೀವನ ಪರಿಚಯ ಇದೆ. ಆದರೆ ಯಾವುದೂ ಮನಮುಟ್ಟುವಂತೆ ಸಮರ್ಪಕವಾಗಿ ನಿರೂಪಿತವಾಗಿಲ್ಲ. ಚಿತ್ರದ ಆರಂಭದಿಂದಲೇ ಒಂದು ರೀತಿಯ ಗೋಜಲು ಗೋಜಲಾದ ನಿರೂಪಣೆ, ಬಿಗಿಯಿಲ್ಲದ ಚಿತ್ರಕತೆ, ತೀರಾ ಸುಮಾರು ಎನಿಸುವ ಸಂಭಾಷಣೆ ಮತ್ತು ಅಭಿನಯ, ಸ್ವಲ್ಪವೂ ಕಿವಿಗೆ ರುಚಿಸದ ಸಂಗೀತ, ಬಾಲಿಶವಾದ ಪಾತ್ರಪೋಷಣೆ ಎಲ್ಲವೂ ಸೇರಿ ಸದ್ಯ ಸಿನಿಮಾ ಮುಗೀತಲ್ಲ ಎನಿಸುವಂತೆ ಮಾಡುವಂಥ ಚಿತ್ರವಾಗಿದೆ ಇದು.

ಹೋಗಲಿ ಏನಾದರೂ ಒಂದು ಸಮಾಧಾನಕರ ಅಂಶ ಇದೆಯಾ ಎಂದು ನೋಡಲು ಹೋದರೆ ನಾಯಕ ನವಾಜುದ್ದೀನ್ ಸಿದ್ದಿಕಿ ಅವರ ನಟನೆ ಅಷ್ಟೇ. ಅವರಿಗೂ ಕೊಟ್ಟಿರುವ ಸಂಭಾಷಣೆಯ ಗುಣಮಟ್ಟ ಕಳಪೆ ಎಂದೇ ಹೇಳಬಹುದು. ಅತ್ಯುತ್ತಮ ನಟ ಕೂಡ ಕೆಟ್ಟ ಚಿತ್ರಕತೆ ಮತ್ತು ನಿರೂಪಣೆ ಇದ್ದಾಗ ಹೇಗೆ ಮಂಕಾಗುತ್ತಾನೆ ಎನ್ನುವುದಕ್ಕೆ ಈ ಚಿತ್ರವೇ ಸಾಕ್ಷಿ. ನಾಯಕಿ ಅವನೀತ್ ಕೌರ್ ಅತಿರೇಕದ ನಟನೆ ಚಿತ್ರವನ್ನು ಮತ್ತೂ ಅಸಹನೀಯವಾಗಿಸುತ್ತೆ. ನಾಯಕ ನಟ ಮತ್ತು ನಟಿಯ ಪಾತ್ರಚಿತ್ರಣ ಮತ್ತು ಪಾತ್ರಪೋಷಣೆ ಅದೆಷ್ಟು ಟೊಳ್ಳು ಆಗಿದೆಯೆಂದರೆ ನಾಯಕಿಯ ಅಣ್ಣ ನಾಯಕಿಗೆ ಬೆಲ್ಟಿನಲ್ಲಿ ಬಾರಿಸುವಾಗ, ಆಕೆ ಆತ್ಮಹತ್ಯೆಯ ಯತ್ನ ಮಾಡಿದಾಗ, ಬಲವಂತವಾಗಿ ತಲೆಹಿಡುಕನೊಬ್ಬನ ಕುತಂತ್ರಕ್ಕೆ ಬಲಿಯಾಗುವಾಗ ವೀಕ್ಷಕರಿಗೆ ಏನೂ ಅನ್ನಿಸುವುದೇ ಇಲ್ಲ. ಪಾತ್ರದೊಂದಿಗೆ ವೀಕ್ಷಕರನ್ನು ಕನೆಕ್ಟ್ ಮಾಡುವ ಕನಿಷ್ಟ ಪ್ರಯತ್ನವನ್ನು ಕೂಡ ನಿರ್ದೇಶಕರು ಮಾಡಿಲ್ಲ ಎನ್ನುವುದು ಖೇದಕರ.

ಶೇರು ಇದ್ದಕ್ಕಿದ್ದ ಹಾಗೆ ಡ್ರಗ್ ಡೀಲರ್ ಆಗಿ ಬದಲಾಗುವ ಘಟನೆ ಬಹಳ ಅಸಹಜವಾಗಿ ಚಿತ್ರಿತವಾಗಿದೆ. ಆಕೆಯ ತಂಗಿ ಮತ್ತು ನಾಯಕಿಯ ಮಗು ಕೊನೆಗೆ ಏನಾದರು, ಎಲ್ಲಿಗೆ ಹೋದರು ಎಂಬ ಪ್ರಸ್ತಾಪವೇ ಇಲ್ಲ. ತಂಗಿಯ ಪಾತ್ರವೇ ಅನಗತ್ಯವಾಗಿ ತುರುಕಲ್ಪಟ್ಟಿದೆ. ವರ್ಣಸಂಕಲನ ಅಂತೂ ಕಣ್ಣಿಗೆ ರಾಚುವ ಹಾಗಿದೆ. ಚಿತ್ರದ ಕ್ಲೈಮಾಕ್ಸ್ ಈಚಿನ ದಿನಗಳಲ್ಲಿ ಬಂದಿರುವಂತಹ ಅತಿ ಕಳಪೆಯಾದ ಕ್ಲೈಮಾಕ್ಸ್ ಎಂದು ಹೇಳಬಹುದು. ನಾಯಕ ಸ್ತ್ರೀವೇಷ ಧರಿಸಿ ಮಾಡಿರುವ ನೃತ್ಯವಂತೂ ಬಹಳ ಕಳಪೆಯಾಗಿದೆ. ತನ್ನ ಇಷ್ಟಕ್ಕೆ ವಿರುದ್ಧವಾಗಿ ವೇಶ್ಯಾವಾಟಿಕೆಗೆ ಇಳಿಯಬೇಕಾದ ಅನಿವಾರ್ಯತೆ ಇದ್ದು ಅಪರಿಚಿತರ ಮುಂದೆ ನರ್ತಿಸುತ್ತಿರುವ ನಾಯಕಿಯ ಮುಖದಲ್ಲಿ ಕಾಣಬೇಕಾದ ದುಗುಡ, ನೋವು, ಹಿಂಸೆ ಯಾವುದೂ ನಾಯಕಿಯ ಮುಖದಲ್ಲಿ ವ್ಯಕ್ತವಾಗಿಲ್ಲ. ಇದ್ದಕ್ಕಿದ್ದಂತೆ ಯಾರೋ ಯಾರಿಗೋ ಗುಂಡು ಹೊಡೆಯುತ್ತಾರೆ. ಮತ್ಯಾರೋ ಎಲ್ಲೋ ಓಡಿಹೋಗುತ್ತಾರೆ. ಕೊನೆಗೆ ಎಲ್ಲವೂ ಸುಖಾಂತ್ಯ. ಇಷ್ಟೆಲ್ಲ ಗೋಜಲು, ಗೊಂದಲಗಳ ನಡುವೆಯೂ ಸ್ವಲ್ಪ ಮಟ್ಟಿಗಾದರೂ ಚಿತ್ರ ನೋಡಿಸಿಕೊಳ್ಳುತ್ತದೆ ಅಂದರೆ ಅದಕ್ಕೆ ಕಾರಣ ನವಾಜುದ್ದೀನ್ ಅವರು ಮಾತ್ರ. ‘ಟೀಕು ವೆಡ್ಸ್ ಶೇರು’ ಆಮೇಜಾನ್ ಪ್ರೈಮಲ್ಲಿ ಲಭ್ಯವಿದೆ.

LEAVE A REPLY

Connect with

Please enter your comment!
Please enter your name here